Advertisement

40-41 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಬೇಸಿಗೆ- ತಂಪು ಪಾನೀಯಗಳಿಗೆ ಮೊರೆ

05:51 PM Apr 02, 2024 | Team Udayavani |

ಉದಯವಾಣಿ ಸಮಾಚಾರ
ಕಲಾದಗಿ: ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಬಿಸಿಲಿಗೆ ಬೇಸತ್ತಿದ್ದು, ಜನರು ಪರದಾಡುವಂತಾಗಿದೆ. ತಂಪು ಪಾನೀಯಗಳಿಗೆ ಮೊರೆ ಹೋಗುವಂತಾಗಿದೆ.

Advertisement

ಮೇ ತಿಂಗಳಲ್ಲಿ ಇರಬೇಕಾದ ತಾಪಮಾನ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿಯೇ ಇದೆ. ಈ ವಾರದ ಸರಾಸರಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ ಇದೆ. ಇದರಿಂದ ಜನತೆ ಬೇಸಿಗೆಯ ಬಿಸಿಗೆ ತತ್ತರಿಸಿದ್ದಾರೆ.ಸಾಮಾನ್ಯವಾಗಿ ಇಷ್ಟು ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏಪ್ರಿಲ್‌ ಕೊನೆಯ ವಾರದಲ್ಲಿ ಮತ್ತು ಮೇ ತಿಂಗಳಲ್ಲಿ ಇರುತ್ತದೆ. ಈ ಬಾರಿ ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಂತೂ 39, 40 ಡಿಗ್ರಿ ಸೆಲ್ಸಿಯಸ್‌ ತಲುಪಿ ಜನತೆಗೆ ಬಿಸಿಲಿನ ತಾಪದ ಅನುಭವವವಾಗುತ್ತದೆ. ಹೀಗಾದರೆ ಮುಂದಿನ ಎರಡು ತಿಂಗಳ ಬೇಸಿಗೆಯನ್ನು ಹೇಗೆ ಕಳೆಯುವುದು ಎಂಬ ಚಿಂತೆ ಇಲ್ಲಿನ ಜನತೆಯದಾಗಿದೆ.

ರೈತರಿಗೂ ಬಿಸಿ: ಸಾಮಾನ್ಯವಾಗಿ ರೈತರು ಬಿಸಿಲು ಮಳೆ ಚಳಿಗೂ ಬಗ್ಗದವರು ಆದರೆ ಪ್ರಸಕ್ತ ವರ್ಷದ ಬಿಸಿಲಿನ ತಾಪಮಾನ ರೈತರಿಗೂ ಬಿಸಿ ಮುಟ್ಟಿಸುತ್ತಿದೆ. ಬೆಳಗ್ಗೆ 10 ಗಂಟೆಯೊಳಗೆ ಹೊಲದ ಕೆಲಸ ಮಾಡುವಂತಾಗಿದೆ. ಬಳಿಕ ಬಿಸಿಲಿನ ಝಳಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರಾದ ಶಾರದಾಳ ಗ್ರಾಮದ ರೈತ ಪ್ರವೀಣ ಅರಕೇರಿ, ಲಕ್ಷ್ಮಣ ಶಿರಬೂರ.

ಬೇಸಿಗೆ ಕಳೆಯುವ ಚಿಂತೆ: ಈ ಹಿಂದಿನ ಸತತ ಮೂರು ವರ್ಷದಿಂದ ತುಸು ಉತ್ತಮ ಮಳೆ ಸುರಿದಿತ್ತು, 2023 ಕಳೆದ ವರ್ಷ ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣ ಮಳೆಯಾಗದೆ ಬರಗಾಲ ಘೋಷಣೆಯಾಗಿದ್ದು, ಒಂದು ತಿಂಗಳು ಮುಂಚೆಯೆ ಬೇಸಿಗೆ ಬಿಸಿಲ ಬೇಗೆ ಜನರನ್ನು ಕಂಗಾಲಾಗಿಸಿದೆ.

ತಂಪು ಪಾನೀಯಕ್ಕೆ ಮೊರೆ: ಬಿಸಿಲಿನ ಬೇಗೆಯನ್ನು ಕಡಿಮೆ ಮಾಡಿಕೊಳ್ಳಲು ಜನತೆ ನೀರಿನ ಅಂಶ ಹೆಚ್ಚು ಇರುವ ಹಣ್ಣು ಹಂಪಲು ಸೇವಿಸುತ್ತಿದ್ದಾರೆ. ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಎಳೆ ನೀರು, ತಂಪು ಪಾನೀಯಗಳ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ಬೇಸಿಗೆಯ ಧಣಿವು ಆರಿಸಿಕೊಳ್ಳಲು ಮಠ, ಮಂದಿರ, ಶಾಲೆ, ನೆರಳಿರುವ ಗಾಳಿ ಬರುವ ಸ್ಥಳ, ಬೇವಿನ ಗಿಡದ ನೆರಳ ಕೆಳಗೆ ಸಮಾಧಾನ ಪಡುತ್ತಿದ್ದಾರೆ. ಇನ್ನು ಕೆಲವು ಜನರು ಪ್ಯಾನ್‌ ಗಳ ಕೆಳಗೆ ಕುಳಿತು ವಿರಾಮ ತೆಗೆದುಕೊಳ್ಳುತಿದ್ದಾರೆ. ಇದರ ಮದ್ಯೆ ಕರೆಂಟ್‌ ಕಣ್ಣುಮುಚ್ಚಾಲೆ ಆಟ ಕೂಡಾ ಇನ್ನೊಂದಿಷ್ಟು ಜಳ ಸಂಕಟ ತಂದೊಡ್ಡುತ್ತಿದೆ.

Advertisement

ವಾರದ ತಾಪಮಾನ: ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ತಾಪಮಾನ ಬೆಳಿಗ್ಗೆ ಕನಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭವಾಗಿ ಮಧ್ಯಾಹ್ಯ 2 ಗಂಟೆಗೆ 39, 40 ಡಿಗ್ರಿ ಸೆಲ್ಸಿಯಸ್‌ಗೆ ಬರುತ್ತದೆ. ಸಂಜೆಯಾಗುತ್ತಿದ್ದಂತೆ ತುಸು ತಾಪಮಾನ ಕಡಿಮೆಯಾದರೂ ಬೇಸಿಗೆಯ ಬೆವರು ಹರಿಯುವುದು ನಿಲ್ಲುವುದಿಲ್ಲ. ಮಾ 29 ಮತ್ತು 30 ರಂದು 39 ಡಿಗ್ರಿ ಇದೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ 40, 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ವರದಿಯಾಗಲಿದೆ.

ವಿಶ್ರಾಂತಿಗೆ ಬೇವಿನ ಗಿಡ: ಜನರು ಬೇಸಿಗೆಯ ಬೇಗುದಿಯನ್ನು ಕಳೆದುಕೊಳ್ಳಲು ಬಯಲುಗಳಲ್ಲಿರುವ ಹಸಿರು ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ, ಅಂಚೆಕಚೇರಿ ಬಳಿ ಇರುವ ಗುಂಪು ಬೇವಿನ ಗಿಡದ ಕೆಳಗಡೆ ಕುಳಿತು ಬೇಗಿಗೆ ಜಳವನ್ನು ಕಳೆಯುತ್ತಿದ್ದಾರೆ. ಹಿರಿಯ ಜೀವಿಗಳು, ವಯಸ್ಕರು, ಯುವಕರು ಅಂಚೆ ಕಚೇರಿ ಬೇವಿನ ಗಿಡದ ಕೆಳಗಡೆ ಕುಳಿತು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.

*ಚಂದ್ರಶೇಖರ ಹಡಪದ

Advertisement

Udayavani is now on Telegram. Click here to join our channel and stay updated with the latest news.

Next