Advertisement

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

01:06 PM Jul 18, 2019 | sudhir |

ಲಂಡನ್‌: ರವಿವಾರ ಲಾರ್ಡ್ಸ್‌ ಅಂಗಳದಲ್ಲಿ ನಡೆದ ವಿಶ್ವಕಪ್‌ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಬೌಂಡರಿ ಆಧಾರದ ಮೂಲಕ ಇಂಗ್ಲೆಂಡ್‌ ಚೊಚ್ಚಲ ವಿಶ್ವಚಾಂಪಿಯನ್‌ ಆಗಿ ಮೆರೆದಿದೆ. ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

ಆ ಬಳಿಕ ಮಾತನಾಡಿದ ಸ್ಟೋಕ್ಸ್‌, ತಮ್ಮ ತಂಡದ ಎಲ್ಲ ಸದಸ್ಯರ 4 ವರ್ಷಗಳ‌ ಪರಿಶ್ರಮವೇ ಇಂದು ವಿಶ್ವಕಪ್‌ ಗೆಲ್ಲಲು ಪ್ರಮುಖ ಕಾರಣ. ಈ ಗೆಲುವಿನ ಹಿಂದೆ ಇಂಗ್ಲೆಂಡ್‌ನ‌ ಎಲ್ಲ ಮಾಜಿ ಆಟಗಾರರ ಸಹಾಯ ಬೆಂಬಲವೂ ಇದೆ ಎಂದರು.

ನ್ಯೂಜಿಲ್ಯಾಂಡ್‌ ಕೂಡ ಚಾಂಪಿಯನ್‌
49.4ನೇ ಓವರ್‌ನಲ್ಲಿ ಗಪ್ಟಿಲ್‌ ಎಸೆದ ಚೆಂಡು ಸ್ಟೋಕ್ಸ್‌ ಬ್ಯಾಟಿಗೆ ತಗುಲಿ ಬೌಂಡರಿ ಗೆರೆ ದಾಟಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಟೋಕ್ಸ್‌, “ನಾನು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ. ಡೈವ್‌ ಮಾಡುವ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ಬೌಂಡರಿ ದಡ ಸೇರಿತ್ತು ಈ ಬಗ್ಗೆ ಅಂಪಾಯರ್‌ಗಳು ಸರಿಯಾದ ತೀರ್ಮಾನ ಕೈಗೊಳ್ಳಬೇಕಿತ್ತು. ಕ್ಷಮೆ ಯಾಚಿಸುವುದನ್ನು ಬಿಟ್ಟು ಇದರ ಬಗ್ಗೆ ನಾನೇನೂ ಹೆಚ್ಚು ಹೇಳುವುದಿಲ್ಲ. ನ್ಯೂಜಿಲ್ಯಾಂಡ್‌ ಕೂಡ ನನ್ನ ದೃಷ್ಟಿಯಲ್ಲಿ ವಿಶ್ವಚಾಂಪಿಯನ್‌. ಅವರ ಆಟಕ್ಕೆ ನಾನು ತಲೆಬಾಗುತ್ತೇನೆ’ ಎಂದು ಕ್ರೀಡಾಸ್ಫೂರ್ತಿ ಮೆರೆದರು.

ನೈಟ್‌ ಬಾರ್‌ ಪ್ರಕರಣದ ವಿಲನ್‌
ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿ ಬೆನ್‌ ಸ್ಟೋಕ್ಸ್‌ 2 ವರ್ಷಗಳ ಹಿಂದೆ ಬ್ರಿಸ್ಟಲ್‌ ನೈಟ್‌ ಬಾರ್‌ ಪ್ರಕರಣವೊಂದರಲ್ಲಿ ಸಿಲುಕಿ ತಮ್ಮ ಕ್ರಿಕೆಟ್‌ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದ ಆಟಗಾರ. ಅನಂತರದ 15 ತಿಂಗಳನ್ನು ತಾನು ಹೇಗೆ ನಿಭಾಯಿಸಿದೆ ಎಂಬುದು ತನಗೇ ತಿಳಿದಿಲ್ಲ. ಬಹುಶಃ ಈ ಘಟನೆಯೇ ತನ್ನ ಬದುಕಿನಲ್ಲಿ, ತಾನು ಆಲೋಚಿಸುವ ರೀತಿಯಲ್ಲಿ, ತನ್ನ ಆಟದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರಬಹುದೆಂದು ಭಾವಿಸುತ್ತೇನೆ ಎಂದಿದ್ದಾರೆ ಸ್ಟೋಕ್ಸ್‌.

ಅಂದು ಇಂಗ್ಲೆಂಡ್‌ ಪಾಲಿಗಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿನ ಕಣ್ಣಿನಲ್ಲಿ ದೊಡ್ಡ ವಿಲನ್‌ ಆಗಿ ಗೋಚರಿಸಿದ್ದ ಬೆನ್‌ ಸ್ಟೋಕ್ಸ್‌ ಇಂದು ಇಂಗ್ಲೆಂಡಿಗೆ ಚೊಚ್ಚಲ ವಿಶ್ವಕಪ್‌ ತಂದುಕೊಡುವಲ್ಲಿ ವಹಿಸಿದ ಪಾತ್ರ ಸ್ಮರಣೀಯ. ಇಂಗ್ಲೆಂಡ್‌ ಹೇಗೇ ಕಪ್‌ ಗೆಲ್ಲಲಿ, ಸ್ಟೋಕ್ಸ್‌ ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಳ್ಳದಿದ್ದರೆ, ಸೂಪರ್‌ ಓವರ್‌ನಲ್ಲಿ ಸಿಡಿಯದೇ ಹೋಗಿದ್ದರೆ ಫೈನಲ್‌ ಫ‌ಲಿತಾಂಶ ಬೇರೆಯೇ ಆಗುತ್ತಿದ್ದುದರಲ್ಲಿ ಅನುಮಾನವೇ ಇಲ್ಲ.

Advertisement

ಸ್ಟೋಕ್ಸ್‌ ತಂದೆ ಬೆಂಬಲ ನ್ಯೂಜಿಲ್ಯಾಂಡಿಗೆ!
ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಬಾರಿಸಿದ ಅಜೇಯ 84 ರನ್‌ ಆಂಗ್ಲರಿಗೆ ಚೊಚ್ಚಲ ವಿಶ್ವಕಪ್‌ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರಬಹುದು. ಆದರೆ ಸ್ಟೋಕ್ಸ್‌ ತಂದೆ ಗೆರಾರ್ಡ್‌ ಸ್ಟೋಕ್ಸ್‌ ಬೆಂಬಲಿಸಿದ್ದು ಮಾತ್ರ ನ್ಯೂಜಿಲ್ಯಾಂಡ್‌ ತಂಡವನ್ನು!

ಇದೇಕೆಂದು ಆಶ್ಚರ್ಯಚಕಿತರಾದಿರಾ? ಸ್ಟೋಕ್ಸ್‌ ಪೂರ್ವಾಪರವನ್ನು ಅರಿತರೆ ಇದು ಸ್ಪಷ್ಟವಾಗುತ್ತದೆ. ಗೆರಾರ್ಡ್‌ ಸ್ಟೋಕ್ಸ್‌ ಮೂಲತಃ ನ್ಯೂಜಿಲ್ಯಾಂಡಿನವರು.

ಬೆನ್‌ ಸ್ಟೋಕ್ಸ್‌ ಹುಟ್ಟಿದ್ದು ಕೂಡ ನ್ಯೂಜಿಲ್ಯಾಂಡಿನಲ್ಲೇ!
ಆರಂಭದ ಕೆಲವು ವರ್ಷಗಳನ್ನು ಬೆನ್‌ ಸ್ಟೋಕ್ಸ್‌ ಕ್ರೈಸ್ಟ್‌ಚರ್ಚ್‌ಲ್ಲಿ ಕಳೆದಿದ್ದರು. ಸ್ಟೋಕ್ಸ್‌ ಗೆ 12 ವರ್ಷವಾಗಿದ್ದಾಗ ಗೆರಾರ್ಡ್‌ ರಗಿº ಕೋಚಿಂಗ್‌ ಗುತ್ತಿಗೆ ಲಭಿಸಿ ಇಂಗ್ಲೆಂಡ್‌ಗೆ ಬಂದರು. ಬಳಿಕ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ಪ್ರಜೆಯಾದರೂ ಅವರ ಹೆತ್ತವರು ಈಗಲೂ ನ್ಯೂಜಿಲ್ಯಾಂಡಿನಲ್ಲೇ ಇದ್ದಾರೆ. ಹೀಗಾಗಿ ಗೆರಾರ್ಡ್‌ ಸ್ಟೋಕ್ಸ್‌ಗೆ ಫೈನಲ್‌ ಪಂದ್ಯದಲ್ಲಿ ಮಗನನ್ನು ಬೆಂಬಲಿಸುವುದೋ ದೇಶವನ್ನು ಬೆಂಬಲಿಸುವುದೋ ಎಂಬ ಉಭಯ ಸಂಕಟ. ಕೊನೆಗೆ ದೇಶಪ್ರೇಮವೇ ಮೇಲುಗೈ ಸಾಧಿಸಿತು. “ನ್ಯೂಜಿಲ್ಯಾಂಡ್‌ ಸೋಲಿನಿಂದ ನಿರಾಶೆಯಾಗಿದೆ. ಅಷ್ಟು ಚೆನ್ನಾಗಿ ಆಡಿಯೂ ಕಪ್‌ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿ.

ಆದರೆ ಸ್ಟೋಕ್ಸ್‌ ಮತ್ತು ತಂಡದ ಆಟವನ್ನು ನಾನು ಆನಂದಿಸಿದ್ದೇನೆ. ಆದರೆ ನನ್ನ ಬೆಂಬಲ ಯಾವತ್ತಿದ್ದರೂ ನ್ಯೂಜಿಲ್ಯಾಂಡಿಗೇ…’ ಎಂದಿದ್ದಾರೆ ಗೆರಾರ್ಡ್‌ ಸ್ಟೋಕ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next