Advertisement

ಜಿಪಂ, ತಾಪಂ ಮೀಸಲು ನಿಗದಿಗೆ ಹೈಕೋರ್ಟಿನಿಂದ 4 ವಾರ ಗಡುವು

12:00 AM Nov 10, 2023 | Team Udayavani |

ಬೆಂಗಳೂರು: ಸಾಂವಿಧಾನಿಕ ಸಂಸ್ಥೆಗಳನ್ನು ಸುದೀರ್ಘ‌ ಅವಧಿಗೆ ಖಾಲಿ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ರಾಜ್ಯದ ಜಿಪಂ-ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರಕಾರಕ್ಕೆ ಕೊನೆಯ ಅವಕಾಶವಾಗಿ ನಾಲ್ಕು ವಾರಗಳ ಗಡುವು ನೀಡಿದೆ.

Advertisement

ಅವಧಿ ಮುಗಿದ ಜಿಪಂ, ತಾಪಂ ಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರು ವುದನ್ನು ಪ್ರಶ್ನಿಸಿ ರಾಜ್ಯ ಚುನಾವಣ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟಿ, ತಾ.ಪಂ. ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಅದನ್ನು ಪೂರ್ಣಗೊಳಿಸಲು ನಾಲ್ಕು ವಾರ ಕಾಲಾವಕಾಶ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, ನ್ಯಾಯಾಲಯ ಹಿಂದೆ ಅನೇಕ ಬಾರಿ ಸರಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. 2023ರ ಜೂನ್‌ 28ರಂದು ಸರಕಾರಕ್ಕೆ ನ್ಯಾಯಾಲಯ 10 ವಾರಗಳ ಕಾಲಾವಕಾಶ ನೀಡಿತ್ತು. ಈಗ ಮತ್ತೆ ಸರಕಾರ ಸಮಯ ಕೇಳುತ್ತಿದೆ. ಇದೊಂದು ಪ್ರಮುಖ ವಿಷಯವಾಗಿದ್ದು, ತ್ವರಿತವಾಗಿ ಕೆಲಸ ಮಾಡಲು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಗೆ ಸೂಚಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ಗೆ ಹೇಳಿತು. ಅಂತಿಮವಾಗಿ ನಾಲ್ಕು ವಾರ ಸಮಯ ನೀಡಿ ವಿಚಾರಣೆಯನ್ನು ಡಿ. 19ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next