Advertisement

ತಿಂಗಳಿಗೆ 4 ಬಾರಿ ಡೀಸಿಗಳ ಭೇಟಿ

02:22 PM May 29, 2022 | Team Udayavani |

ಬೀದರ: ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಇನ್ಮುಂದೆ ಜಿಲ್ಲಾಧಿಕಾರಿಗಳು ತಿಂಗಳಲ್ಲಿ ನಾಲ್ಕು ಬಾರಿ ತಮ್ಮ ಜಿಲ್ಲೆಯ ತಹಶೀಲ್ದಾರ್‌ ಕಚೇರಿಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

Advertisement

ವಡಗಾಂವ್‌ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಮನೆ ಬಾಗಿಲಿಗೆ ಆಡಳಿತ ಯಂತ್ರ ವ್ಯವಸ್ಥೆಯಿಂದ ಜನರ ಅಲೆದಾಟ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಅಧಿಕಾರಿ ವರ್ಗ ಜನ ಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಪ್ರತಿ ವಾರ ಒಂದು ತಹಶೀಲ್ದಾರ್‌ ಕಚೇರಿಗೆ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟು, ಜನರ ಸಮಸ್ಯೆ ಆಲಿಸುವರು ಮತ್ತು ಕುಂದು ಕೊರತೆಗಳಿಗೆ ಸ್ಪಂದಿಸುವರು. ಈ ಸಂಬಂಧ ಮೂರು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದರು.

ವಡಗಾಂವ್‌ದಲ್ಲಿ ಮಾಡಿದ್ದು ಏಳನೇ ಗ್ರಾಮ ವಾಸ್ತವ್ಯ. ಇದರಿಂದ ಜನರ ಕಷ್ಟ ಅರಿತುಕೊಳ್ಳಲು ಮತ್ತು ಅವುಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಹೊಸ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿದೆ. ಹಾಗಾಗಿ ಗ್ರಾಮ ವಾಸ್ತವ್ಯ ಎನ್ನುವುದು ಪಾಠ ಶಾಲೆ ಆಗಿದ್ದು, ಮುಂದಿನ ವಾಸ್ತವ್ಯದಲ್ಲಿ ಮತ್ತಷ್ಟು ಸುಧಾರಣೆಗೆ ಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಬಂಜಾರಾ ತಾಂಡಾ ಮತ್ತು ಕುರುಬರಹಟ್ಟಿ ಗುರುತಿಸಲಾಗಿದ್ದು, ಬೀದರ ಜಿಲ್ಲೆಯ 98 ಸೇರಿ ಈಗಾಗಲೇ 800 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದ ಪ್ರದೇಶಗಳನ್ನು ಕಂದಾಯ ವ್ಯಾಪ್ತಿಗೆ ಸೇರಿಸಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.

ಈಗಾಗಲೇ ವಾಸ್ತವ್ಯ ಮಾಡಿದ ಏಳು ಗ್ರಾಮಗಳಿಗೆ ಅಭಿವೃದ್ಧಿ ಕಾಮಗಾರಿಗಾಗಿ ತಲಾ ಒಂದು ಕೋಟಿ ರೂ. ಘೋಷಣೆ ಮಾಡಿದ್ದು, ಅನುದಾನದ ಸದ್ಬಳಕೆ ಸಂಬಂಧಿಸಿದಂತೆ ಖುದ್ದಾಗಿ ಸೂಪರ್‌ವೈಸ್‌ ಮಾಡುತ್ತೇನೆ. ನಿರ್ಲಕ್ಷé ಮತ್ತು ವಿಳಂಬ ಮಾಡುವವರಿಗೆ ಬೇರೆಡೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದರು.

Advertisement

ಗ್ರಾಮೀಣರ ಸಮಸ್ಯೆಗಳಿಗೆ ದನಿಯಾದ ಸಚಿವ

ಬೀದರ: ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿ ರುವ ಔರಾದ ತಾಲೂಕಿನ ವಡಗಾಂವ್‌ನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌. ಅಶೋಕ ಶನಿವಾರ ಗ್ರಾಮ ಸಂಚಾರ ನಡೆಸಿ, ಸ್ಥಳೀಯರ ಸಮಸ್ಯೆಗಳಿಗೆ ದನಿಯಾದರು. ಆ ಮೂಲಕ ಗ್ರಾಮಸ್ಥರಲ್ಲಿ ಭರವಸೆ ಬೆಳಕು ಮೂಡಿಸಿದರು.

ವಸತಿ ನಿಲಯದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಸಚಿವರು, ಬೆಳಗ್ಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಡೆಸಿ ಮತ್ತು ಮನೆಗಳಿಗೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದರು. ಕೆಲವೊಂದನ್ನು ಸ್ಥಳದಲ್ಲೇ ಪರಿಹರಿಸುವ ಪಯತ್ನ ಮಾಡಿದರು. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಮತ್ತು ಜಿಲ್ಲಾಧಿಕಾರಿಗಳು ಸಾಥ್‌ ನೀಡಿದರು. ಮೊದಲು ನೇರವಾಗಿ ರಸ್ತೆ ಬದಿ ಹೋಟೆಲ್‌ಗೆ ತೆರಳಿ ಕಟ್ಟೆ ಮೇಲೆ ಕುಳಿತು ಟೀ ಸೇವಿಸಿದರು.

ಅಲ್ಲೇ ಸುತ್ತಮುತ್ತಲಿನ ಜನರನ್ನು ತಾವೇ ಖುದ್ದಾಗಿ ಕರೆದು, ನಿಮ್ಮ ಸಮಸ್ಯೆಗಳು ಏನು, ಗ್ರಾಮದಲ್ಲಿ ಏನಾಗಬೇಕು? ಎಂದು ವಿಚಾರಿಸಿದರು. ಪೆನ್ಶನ್‌ ಸಿಗುತ್ತಿದೆಯಾ? ಎಂದು ಹಿರಿಯರನ್ನು, ಜಮೀನಿನಲ್ಲಿ ಬೆಳೆ ಬಿತ್ತನೆ ಬಗ್ಗೆ ರೈತರನ್ನು ಪ್ರಶ್ನಿಸಿದರು. ಈ ವೇಳೆ ಯುವ ರೈತ ಶಿವಕುಮಾರ ಬೀಜ-ಗೊಬ್ಬರ ದುಬಾರಿ ದರದಿಂದ ರೈತರಿಗೆ ಆಗುತ್ತಿರುವ ಆರ್ಥಿಕ ಹೊರೆ ಬಗ್ಗೆ ಗಮನಸೆಳೆದು, ಆಂಧ್ರಪ್ರದೇಶ ಮಾದರಿಯಲ್ಲಿ ದರ ಇಳಿಸಬೇಕು ಎಂದು ಒತ್ತಾಯಿಸಿದರು.

ಹೈನುಗಾರಿಕೆ ಮಾಡಿಕೊಂಡಿರುವ ತಮಗೆ ಹೆಚ್ಚುವರಿ ಜಾನುವಾರು ಖರೀದಿಗೆ ಬ್ಯಾಂಕ್‌ ಸಾಲ ಸಿಗು ತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ಅಶೋಕ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಮೂಲಕ ತ್ವರಿತ ಸಾಲ ಮಂಜೂರಿಗೆ ಕ್ರಮದ ಭರವಸೆ ನೀಡಿದರು. ಮಗಳು ಶೋಭಾ ಗಂಡ ಮೃತಪಟ್ಟಿದ್ದು, ಮಗುವಿನೊಂದಿಗೆ ತವರು ಮನೆಯಲ್ಲೇ ವಾಸವಾಗಿದ್ದಾಳೆ. ವಿಧವಾ ವೇತನ ಮಂಜೂರು ಮಾಡುವಂತೆ ತಾಯಿ ಮನವಿ ಮಾಡಿದಳು.

ಇಂದೇ ಸಂಜೆ ಆರು ಗಂಟೆಯೊಳಗಾಗಿ ಮಂಜೂರು ಆಗಲಿದೆ ಎಂದು ಭರವಸೆ ನೀಡಿ, ಜಿಲ್ಲಾಧಿಕಾರಿಗೆ ಈ ಬಗ್ಗೆ ಸೂಚಿಸಿದರು. ಗ್ರಾಮದಲ್ಲಿ ರಸ್ತೆ-ಚರಂಡಿ ಸೇರಿ ಮೂಲ ಸೌಕರ್ಯಗಳ ಬಗ್ಗೆ ಕೆಲವರು ಪ್ರಸ್ತಾಪಿಸಿದಾಗ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ಘೋಷಿಸಿದ್ದೇನೆ ಎಂದು ತಿಳಿಸಿದರು. ಮಾರ್ಗ ಮಧ್ಯ ಬುಟ್ಟಿ ನೇಯುವ ಕಾಯಕ ಮಾಡಿಕೊಂಡಿರುವ ಸುಶೀಲಾಬಾಯಿ ಎಂಬುವರ ಮನೆಗೆ ಭೇಟಿ ನೀಡಿದರು. ಅವರ ಕುಟುಂಬದವರ ಜತೆ ಮಾತನಾಡಿ, ವೃತ್ತಿ ಮತ್ತು ಆದಾಯದ ಬಗ್ಗೆ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next