ಮಂಡ್ಯ/ಶ್ರೀರಂಗಪಟ್ಟಣ/ಬೆಂಗಳೂರು: ದಸರಾ ಸಮಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕೆಯ ಮೇರೆಗೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಲ್ವರು ಶಂಕಿತ ಉಗ್ರರನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಶಂಕಿತ ಉಗ್ರರು ಶ್ರೀರಂಗಪಟ್ಟಣದಲ್ಲಿ ಅಡಗಿದ್ದರು ಎಂದು ತಿಳಿದುಬಂದಿದ್ದು, ರಾಷ್ಟ್ರೀಯ ಭದ್ರತಾ ಪಡೆ ಅಧಿಕಾರಿಗಳು ಇವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಮೈಸೂರು ದಸರಾ ಸಮಯದಲ್ಲಿ ಉಗ್ರರು ಸ್ಫೋಟಕ್ಕೆ ಸಂಚು ನಡೆಸಿರುವ ಬಗ್ಗೆ ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು. ದೇಶದೊಳಕ್ಕೆ ನುಗ್ಗಿದ್ದ ಉಗ್ರರು ಸೆಟಲೈಟ್ ಫೋನ್ ಬಳಸಿ ದಸರಾ ವೇಳೆ ಸ್ಫೋಟಕ್ಕೆ ಸಂಚು ನಡೆಸಿದ್ದರು ಎಂದು ಗೊತ್ತಾಗಿದೆ. ಉಗ್ರರ ಚಲನವಲನ ಹಾಗೂ ಅವರ ಕಾರ್ಯಚಟುವಟಿಕೆ ಮೇಲೆ ತೀವ್ರ ನಿಗಾ ವಹಿಸಿದ್ದ ರಾಷ್ಟ್ರೀಯ ಭದ್ರತಾ ಪಡೆ ಅಧಿಕಾರಿಗಳು ಸೆಟಲೈಟ್ ಫೋನ್ ಸಿಗ್ನಲ್ ಆಧಾರದ ಮೇಲೆ ಶಂಕಿತ ಉಗ್ರರಿದ್ದ ರಹಸ್ಯ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ.
ಇವರು ಪಾಕಿಸ್ಥಾನದ ಕರಾಚಿ ಮೂಲದವರು ಎಂದು ಹೇಳಲಾಗುತ್ತಿದೆ. ಬಂಧಿತರನ್ನು ತನಿಖಾಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆದರೆ ಶಂಕಿತ ಉಗ್ರರ ಬಂಧನ ಕುರಿತ ಮಾಹಿತಿಯನ್ನು ಸ್ಥಳೀಯ ಪೊಲೀಸರು ಖಚಿತಪಡಿಸುತ್ತಿಲ್ಲ.
ಎಲ್ಲೆಡೆ ಕಟ್ಟೆಚ್ಚರ
ಮೈಸೂರು ಸೇರಿ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ದಳ ರಾಜ್ಯಕ್ಕೆ ಮಾಹಿತಿ ರವಾನಿಸಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಭದ್ರತೆಯನ್ನೂ ರಾಜ್ಯ ಪೊಲೀಸ್ ಇಲಾಖೆ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ, ಹೊಳೆನರಸೀಪುರ, ಉಡುಪಿ, ಕಾರವಾರ ಸುತ್ತಮುತ್ತಲ ಭಾಗಗಳಲ್ಲಿ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ನಿಷೇಧಿತ ಸೆಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ಕೇಂದ್ರ ಗುಪ್ತಚರ ದಳಕ್ಕೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಕಳೆದ ಒಂದೂವರೆ ತಿಂಗಳಿಂದ ಸತತ ಶೋಧ ನಡೆಸಿತ್ತು.