ಬೆಂಗಳೂರು: ನಗರದ ಒಂಬತ್ತು ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಪರಿಣಾಮ ಗುರುವಾರ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಮೂಲಕ ನಗರದಲ್ಲಿ 675 ಪೊಲೀಸ್ ಮಂದಿ ಸೋಂಕಿಗೊಳಗಾಗಿದ್ದು, ಈ ಪೈಕಿ 410 ಮಂದಿ ಗುಣಮುಖರಾಗಿದ್ದಾರೆ. ಎಂಟು ಮಂದಿ ಮೃತಪಟ್ಟಿದ್ದಾರೆ. ಸುಮಾರು 1,100 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಮಾಗಡಿ ರಸ್ತೆ, ಯಶವಂತಪುರ, ಕೋರಮಂಗಲ, ಶಿವಾಜಿನಗರ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಪ್ರಕರಣವೊಂದರಲ್ಲಿ ಬಂಧಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಯಶವಂತಪುರ ಠಾಣೆಯಲ್ಲಿ ಇರಿಸಿದ್ದರು. ಇದೀಗ ಈ ಆರೋಪಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕೋರಮಂಗಲ ಠಾಣೆಯ ಆರೋಪಿ ಹಾಗೂ ಮೂವರು ಸಿಬ್ಬಂದಿಗೆ ಕೊರೊನಾ ಪತ್ತೆಯಾಗಿದೆ. ಶಿವಾಜಿನಗರ ಠಾಣೆಯ ಮೂವರು ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು, ಮಾಗಡಿ ರಸ್ತೆ ಠಾಣೆಯಲ್ಲೂ ಮೂವರು ಸಿಬ್ಬಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಹೀಗಾಗಿ ಒಂಭತ್ತು ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಸುಮಾರು 40 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ಗಸ್ತು: ಲಾಕ್‌ಡೌನ್ ಮೂರನೇ ದಿನವಾದ ಗುರುವಾರವೂ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಗರದ ಪ್ರದಕ್ಷಿಣೆ ನಡೆಸಿದರು. ಆಗ್ನೇಯ ವಿಭಾಗದ ಕಡೆ ಲಾಕ್‌ಡೌನ್ ವೀಕ್ಷಣೆ ಮಾಡಿದ ಅವರು ಅನಗತ್ಯವಾಗಿ ಓಡಾಡು ತ್ತಿದ್ದ ವಾಹನ ಸವಾರರನ್ನು ಹಿಡಿದು ತಪಾಸಣೆ ನಡೆಸಿದರು.
500 ವಾಹನಗಳು ಜಪ್ತಿ : ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದ 500ಕ್ಕೂ ಹೆಚ್ಚು ವಾಹನಗಳನ್ನು ಕಳೆದೆರಡು ದಿನಗಳಲ್ಲಿ ಜಪ್ತಿ ಮಾಡಲಾಗಿದೆ. ಮಂಗಳವಾರ ರಾತ್ರಿ ಎಂಟು ಗಂಟೆಯಿಂದ ಗುರುವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಎಂಟು ವಿಭಾಗಗಳಲ್ಲಿ 500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಈ ವಾಹನ ಮಾಲೀಕರು ಲಾಕ್‌ಡೌನ್ ಮುಗಿದ ಬಳಿಕ ತಮ್ಮ ವಾಹನಗಳನ್ನು ಕೋರ್ಟ್ ನಲ್ಲಿ ವಿಧಿಸುವ ದಂಡ ಪಾವತಿಸಿ ಪಡೆದುಕೊಳ್ಳಬೇಕು. ಜತೆಗೆ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳು ಬಾಕಿಯಿದ್ದರೆ ಅದನ್ನು ಪಾವತಿಸಿ ವಾಹನ ಪಡೆದುಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.
ಪೊಲೀಸರಿಗೆಪ್ರತ್ಯೇಕ : ಸಹಾಯವಾಣಿ ಕೇಂದ್ರಪೊಲೀಸರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲೇ ಪ್ರತ್ಯೇಕ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಧಿಕಾರಿ-ಸಿಬ್ಬಂದಿ ಹಾಗೂ ಅವರ ಕುಟುಂಬಗಳು ಕೋವಿಡ್ ಸಂಬಂಧಿತ ಮಾಹಿತಿ ಮತ್ತು ಸಹಾಯಕ್ಕಾಗಿ ಈ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಪೊಲೀಸ್ ಅಧಿಕಾರಿ-ಸಿಬ್ಬಂದಿ 080-22942625 ಮತ್ತು 080-22943772 ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
736 ಪ್ರಕರಣ : ಲಾಕ್‌ಡೌನ್ ಜಾರಿ ಮಾಡಿದ್ದರೂ ಹೋಮ್ ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು ನಿಯಮ ಮೀರಿ ಮನೆಯಿಂದ ಹೊರಬಂದು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಜತೆಗೆ ಇತರರಿಗೂ ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳ ಸೂಚನೆ
ಮೇರೆಗೆ ಪೊಲೀಸರು ಗುರುವಾರ ರಾತ್ರಿ ಏಳು ಗಂಟೆವರೆಗೂ ನಗರದಲ್ಲಿ ಹೋಮ್ ಕ್ವಾರಂಟೈನ್ ಉಲ್ಲಂ ಸಿದವರ ವಿರುದ್ಧ 736 ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.