ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯುತ್ ವೋಲ್ಟೆಜ್ ಸಮಸ್ಯೆ ಮತ್ತು ಪದೇ ಪದೆ ವಿದ್ಯುತ್ ಪರಿವರ್ಧಕಗಳು ಹಾಳಾಗುತ್ತಿದ್ದುದನ್ನು ಮನಗಂಡು 4 ಕಡೆ ವಿದ್ಯುತ್ ವಿತರಣಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದಲ್ಲದೇ ಪಾಳ್ಯ ಮತ್ತು ಹೂಗ್ಯಂ ಗ್ರಾಮಗಳಲ್ಲಿಯೂ ಕೇಂದ್ರ ತೆರೆಯಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು. ಹನೂರು ಸಮೀಪದ ಅಜ್ಜೀಪುರ ಗ್ರಾಮದಲ್ಲಿ 5.2 ಕೋಟಿ ರೂ. ವೆಚ್ಚದ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಾದಪ್ಪನ ಬೆಟ್ಟಕ್ಕೆ ಮಂಜೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದಾಗ ವಿದ್ಯುತ್ ಸಮಸ್ಯೆಯ ಬಗ್ಗೆ ತಿಳಿಸಿ ಕೊತ್ತನೂರು, ಅಜ್ಜೀಪುರ, ಲೊಕ್ಕನಹಳ್ಳಿ ಮತ್ತು ಮಹದೇಶ್ವರ ಬೆಟ್ಟಕ್ಕೆ ವಿದ್ಯುತ್ ವಿತರಣಾ ಕೇಂದ್ರವನ್ನು ಮಂಜೂರು ಮಾಡಲಾಗಿತ್ತು ಎಂದರು.
ಮುಂದಿನ ದಿನಗಳಲ್ಲಿ ಲೋಕಾರ್ಪಣೆ: ಈ ಪೈಕಿ ಕೊತ್ತನೂರು ಕೇಂದ್ರದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇನ್ನು ಮಹದೇಶ್ವರ ಬೆಟ್ಟ ಕೇಂದ್ರದ ಕಾಮಗಾರಿಗೆ ಅರಣ್ಯದೊಳಗೆ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಲು ಅರಣ್ಯ ಇಲಾಖಾ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದೀಗ ಸಮಸ್ಯೆ ನಿವಾರಣೆಯಾಗಿದ್ದು ಭೂಮಿಯ ಒಳಗಿನಿಂದ ಲೈನ್ ಎಳೆಯಲು ಅನುಮತಿ ನೀಡಿದ್ದು ಕಾಮಗಾರಿಯು ಡಿಪಿಆರ್ ಹಂತದಲ್ಲಿದ್ದು ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ: ಲೊಕ್ಕನಹಳ್ಳಿಯಲ್ಲಿ 2 ಎಕರೆ ಜಾಗದ ಸಮಸ್ಯೆಯಿದ್ದ ಹಿನ್ನೆಲೆ ಕಾಮಗಾರಿ ತಡವಾಗಿತ್ತು. ಇದೀಗ 2 ಎಕರೆ ಜಾಗವನ್ನು ಸಾರ್ವಜನಿಕರಿಂದ ಖರೀದಿಸಲು ಇಲಾಖಾ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಇದಲ್ಲದೇ ಪಾಳ್ಯ ಮತ್ತು ಹೂಗ್ಯಂ ಗ್ರಾಮಗಳಿಗೂ ವಿದ್ಯುತ್ ವಿತರಣಾ ಕೇಂದ್ರದ ಅವಶ್ಯಕತೆಯಿದೆ. ಈ ಎರಡೂ ಗ್ರಾಮಗಳಿಗೂ ಮುಂದಿನ ದಿನಗಳಲ್ಲಿ ಕೇಂದ್ರವನ್ನು ಮಂಜೂರು ಮಾಡಿಸಲಾಗುವುದು. ಈ ಕಾಮಗಾರಿಗಳೆಲ್ಲಾ ಮುಕ್ತಾಯವಾದ ಬಳಿಕ ಕ್ಷೇತ್ರದ ಎಲ್ಲಾ ಗ್ರಾಮಗಳ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿತ್ತು: ಅಜ್ಜೀಪುರ ಗ್ರಾಮದ ಸಮೀಪ ಗುಂಡಾಲ್ ಜಲಾಶಯವಿದ್ದು ಇಲ್ಲಿ ಅಂತರ್ಜಲ ಮಟ್ಟವೂ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಗ್ರಾಮದ ಸುತ್ತಮುತ್ತ ತೋಟದ ಮನೆಗಳು ಹೆಚ್ಚಾಗಿದ್ದು ಬೋರ್‌ವೆಲ್‌ಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಇಲ್ಲಿ ವಿದ್ಯುತ್ ವೋಲ್ಟೆಜ್ ಸಮಸ್ಯೆ ಎದುರಾಗುತಿತ್ತು. ಅಲ್ಲದೇ ಆಗಾಗ ವಿದ್ಯುತ್ ಪರಿವರ್ಧಕಗಳೂ ಕೂಡ ದುರಸ್ತಿಗೊಳ್ಳುತ್ತಿದ್ದವು. ಆದ್ದರಿಂದ ಅಜ್ಜೀಪುರ ಗ್ರಾಮಕ್ಕೆ ಒಂದು ವಿದ್ಯುತ್ ವಿತರಣಾ ಕೇಂದ್ರ ಮಾಡಿಕೊಡಿ ಎಂದು ಸಾರ್ವಜನಿಕರು ಆಗಾಗ್ಗೆ ಬೇಡಿಕೆ ಸಲ್ಲಿಸುತ್ತಿದ್ದರು. ಈ ಹಿನ್ನೆಲೆ 5.2 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಂಜೂರು ಮಾಡಿಸಿದ್ದು ಮುಂದಿನ 9 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ವಿವಿಧೆಡೆ ಸಿಸಿ ರಸೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ: ರಾಮಾಪುರ ಲೋಕೋಪಯೋಗಿ ಇಲಾಖಾ ಉಪವಿಭಾಗಕ್ಕೆ ಎಸ್‌ಸಿಪಿ ಯೋಜನೆಯಡಿ 6.5 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಮೀದ ಕಾಂಚಳ್ಳಿ, ದೊಮ್ಮನಗದ್ದೆ, ಪೂಜಾರಿಬೋವಿ ದೊಡ್ಡಿ ಮತ್ತು ಗೋಪಿಶೆಟ್ಟಿಯೂರು ಗ್ರಾಮಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಮಾಪುರ ವಿಭಾಗದ ಗ್ರಾಮಗಳಿಗೆ 6.5 ಕೋಟಿ ಹಣ ಬಿಡುಗಡೆಯಾಗಿದ್ದು ಹನೂರು ವಿಭಾಗದ ವಿವಿಧ ಗ್ರಾಮಗಳಿಗೂ ಲೋಕೋಪಯೋಗಿ ಇಲಾಖಾವತಿಯಿಂದ 6.54 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಬಸವರಾಜು, ತಾ.ಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷೆ ಸುಧಾಮಣಿ, ಮುಖಂಡರಾದ ಜಯರಾಜ್, ನಾಗರಾಜ್, ಮುರುಡೇಶ್ವರ ಸ್ವಾಮಿ, ಮಾದೇಗೌಡ, ಗುತ್ತಿಗೆದಾರರಾದ ನಾಗೇಂದ್ರಮೂರ್ತಿ, ಖಲಂದರ್ ಪಾಷಾ ಇತರರು ಇದ್ದರು.