ನವದೆಹಲಿ:ಪಂಜಾಬ್ ಬಟಿಂಡಾ ಸೇನಾ ಘಟಕದೊಳಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ದುರಂತ ಅಂತ್ಯ ಕಂಡಿರುವ ಘಟನೆ ಬುಧವಾರ (ಎ.12) ಬೆಳಗ್ಗೆ ನಡೆದಿದೆ. ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು, ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Election: ರಾಜೀನಾಮೆಗೆ ನಿರ್ಧರಿಸಿದ ಲಕ್ಷ್ಮಣ ಸವದಿ; ‘ಕೈʼ ಸೇರುತ್ತಾರೆ ಮಾಜಿ ಡಿಸಿಎಂ?
ಬಟಿಂಡಾ ಸೇನಾ ಘಟಕದೊಳಗೆ ಇಂದು ಮುಂಜಾನೆ ಈ ಘಟನೆ ನಡೆದಿರುವುದಾಗಿ ಆರ್ಮಿಯ ಸೌತ್ ವೆಸ್ಟರ್ನ್ ಕಮಾಂಡ್ ಪ್ರಕಟನೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ನಾಲ್ವರು ಯೋಧರು ಮೃತ್ಯುಗೀಡಾಗಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಘಟನಾ ಸ್ಥಳಕ್ಕೆ ಪಂಜಾಬ್ ಪೊಲೀಸರು ಭೇಟಿ ನೀಡಿದ್ದರು ಕೂಡಾ ಅವರಿಗೆ ಸೇನಾ ಘಟಕದ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ವರದಿ ವಿವರಿಸಿದೆ. ಸೇನಾ ಅಧಿಕಾರಿಯ ಕಚೇರಿಯೊಳಗೆ ಗುಂಡಿನ ದಾಳಿ ನಡೆದಿರುವುದಾಗಿ ವರದಿ ಹೇಳಿದೆ.
ಇದು ಯಾವುದೇ ಉಗ್ರಗಾಮಿ ಚಟುವಟಿಕೆಯಲ್ಲ, ಇದೊಂದು ಆಂತರಿಕ ಘಟನೆಯಾಗಿದೆ. ಈ ಬಗ್ಗೆ ಸೇನಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಪಂಜಾಬ್ ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್ ಪಿಎಸ್ ಪರ್ಮಾರ್ ತಿಳಿಸಿದ್ದಾರೆ.