ಚಿಕ್ಕೋಡಿ: ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಲ್ಲಿನ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ 7 ಕೊಠಡಿ ನಿರ್ಮಾಣಕ್ಕಾಗಿ 70 ಲಕ್ಷ.ರೂ.ಅನುದಾನವು ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿಪ್ಪಾಣಿ ಮತಕ್ಷೇತ್ರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣಕ್ಕಾಗಿ ಜಿಲ್ಲಾ ಖನಿಜ ನಿಧಿ ಯೋಜನೆಯಡಿ 1 ಕೋಟಿ. ರೂ. ಅನುದಾನ ಮಂಜೂರು ಮಾಡಬೇಕೆಂದು ಬೇಡಿಕೆಯಿಟ್ಟು ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಮ್ಮ ಬೇಡಿಕೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಬಂಧಪಟ್ಟ ವಿಭಾಗವು 70 ಲಕ್ಷ.ರೂ.ಗಳ ಅನುದಾನದ ಮಂಜೂರಾತಿ ನೀಡಲಾಗಿದೆ ಎಂದರು.
ಈ ಅನುದಾನದಲ್ಲಿ ಹಳದಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ನಿರ್ಮಾಣಕ್ಕಾಗಿ 20 ಲಕ್ಷ.ರೂ, ಭೀಮಾಪುರವಾಡಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಗಾಗಿ 10 ಲಕ್ಷ.ರೂ, ಹಂಚಿನಾಳ ಕೆ.ಎಸ್. ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳಿಗಾಗಿ 20 ಲಕ್ಷ.ರೂ. ಹಾಗೂ ನಿಪ್ಪಾಣಿಯ ಸರ್ಕಾರಿ ಪ್ರೌಢಶಾಲೆಯ 2 ಕೊಠಡಿಗಳಿಗಾಗಿ 20 ಲಕ್ಷ.ರೂ. ಗಳನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಿಪ್ಪಾಣಿ ಶೈಕ್ಷಣಿಕ ತಾಲೂಕಿನಲ್ಲಿ 4 ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ಫಲಿತಾಂಶದಲ್ಲಿ ದ್ವಿತೀಯ ಸ್ಥಾನ ಹಾಗೂ ರಾಜ್ಯದಲ್ಲಿಯೇ 15 ನೇ ಸ್ಥಾನ ಪಡೆದುಕೊಂಡಿದ್ದು, ಶಿಕ್ಷಕ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವು ಅತ್ಯಂತ ಮಹತ್ವವನ್ನು ಪಡೆದುಕೊಳ್ಳುತ್ತಿರುವುದನ್ನು ಮನಗಂಡು ಸರ್ಕಾರವು ಈ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತಿದ್ದು, ನಿಪ್ಪಾಣಿ ಮತಕ್ಷೇತ್ರದಲ್ಲಿ ಒಟ್ಟು ನಾಲ್ಕು ಆಂಗ್ಲ ಮಾಧ್ಯಮ ಶಾಲೆಗಳು ಪ್ರಾರಂಭವಾಗಲಿವೆ. ಪ್ರಾರಂಭದಲ್ಲಿ ಎಲ್ಕೆಜಿ ಹಾಗೂ ಯುಕೆಜಿ ವರ್ಗಗಳಿಗೆ ಪ್ರವೇಶ ಪಡೆಯಲಾಗುತ್ತಿದ್ದು, ಮಾಣಕಾಪೂರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಾರದಗಾದ ಮರಾಠಿ ಹಿರಿಯ ಪ್ರಾಥಮಿಕ ಶಾಲೆ, ಅಪ್ಪಾಚಿವಾಡಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಿಪ್ಪಾಣಿಯ ಸರ್ಕಾರಿ ಪ್ರೌಢಶಾಲೆ ಸೇರಿದಂತೆ 4 ಕಡೆಗಳಲ್ಲಿ ಪ್ರಾರಂಭವಾಗಲಿವೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಈ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಯವಂತ ಭಾಟಲೆ, ನಗರಸೇವಕರಾದ ರಾಜು ಗುಂದೇಶಾ, ಸಂತೋಶ ಸಾಂಗಾವಕರ, ಸದ್ದಾಂ ನಾಗಾರ್ಜಿ, ವಿನಾಯಕ ವಡೆ, ನೀತಾ ಬಾಗಡಿ, ರಮಜನಾ ಇಂಗವಲೆ, ಉಪಾಸನಾ ಗಾರವೆ ಇತರರು ಇದ್ದರು.