Advertisement

4 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣಕ್ಕೆ ಚಿಂತನೆ

10:09 AM Dec 27, 2019 | sudhir |

ಕಾಪು: ಶಿಕ್ಷಣ ಕ್ಷೇತ್ರವನ್ನು ಕ್ರಿಯಾಶೀಲಗೊಳಿಸಲು ಸರಕಾರ ವಿಶೇಷ ಒತ್ತು ನೀಡುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ 4 ಲಕ್ಷ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿಯೊಂದಿಗೆ ಶಿಕ್ಷಣ ನೀಡಲು ಯೊಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಬುಧವಾರ ಕಾಪು – ಪೊಲಿಪು ಸರಕಾರಿ ವಿದ್ಯಾ ಸಂಸ್ಥೆಗಳ ಶತ, ವಜ್ರ,
ಸ್ವರ್ಣ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ ಭಾಷಾ ಕೌಶಲವೃದ್ಧಿಗೆ “ವಿಶ್ವಾಸ ಕಿರಣ’ ಗ್ರಾಮೀಣ ವಿದ್ಯಾರ್ಥಿಗಳ ಇಂಗ್ಲಿಷ್‌ ಭಾಷಾ ಕೌಶಲವ‌ನ್ನು ಉತ್ತಮ ಪಡಿಸಲು ವಿಶೇಷ ತರಗತಿ ಸಹಿತವಾಗಿ “ವಿಶ್ವಾಸಕಿರಣ’ ಎಂಬ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನಗರ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಕೇಂದ್ರ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ ಡಿಜಿಟಲ್‌ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.

10 ಸಾವಿರ ಶಿಕ್ಷಕರ ನೇಮಕ
ರಾಜ್ಯದಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದ್ದು, ಕಾಲೇಜು ಮಟ್ಟದಲ್ಲಿ 1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳನ್ನು ತುಂಬಲಾಗುವುದು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಗಳನ್ನು ಒಳಗೊಂಡಂತೆ 5,771 ಕೊಠಡಿಗಳ ಮರು ನಿರ್ಮಾಣ ಮತ್ತು ದುರಸ್ತಿಗೆ ಸರಕಾರ ವಿಶೇಷ ಅನುದಾನ ಬಿಡುಗಡೆಗೊಳಿಸಿದೆ ಎಂದರು.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಗೌರವಾಧ್ಯಕ್ಷ, ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಮುಂದಿನ ವರ್ಷದಿಂದ ಇಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿಯ ಹಂತದಲ್ಲಿದೆ. ಶಾಲೆಯ ನೂತನ ರಂಗಮಂಟಪಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಹೆಚ್ಚುವರಿ ಒಂದು ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Advertisement

ಸವಾಲು ಸ್ವೀಕರಿಸಲು ಪೊಲಿಪು ಶಾಲೆ ಸನ್ನದ್ಧ
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸಮಿತಿಯ ಗೌರವಾಧ್ಯಕ್ಷ ಡಾ| ಬಾವುಗುತ್ತು ರಘುರಾಮ ಶೆಟ್ಟಿ ಮಾತನಾಡಿ, ಸ್ಮಾರ್ಟ್‌ ಯುಗದಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಮಾದರಿಯ ಶಿಕ್ಷಣವನ್ನೂ ನೀಡಲು ಪೊಲಿಪು ಶಾಲೆ ಸಮರ್ಥವಾಗಿದ್ದು, ಈ ಶಾಲೆಯನ್ನು ಉಳಿಸಿ, ಬೆಳೆಸುವಲ್ಲಿ ನಾವೆಲ್ಲರೂ ಕೈಜೋಡಿಸುವುದು ಅಗತ್ಯ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘುಪತಿ ಭಟ್‌, ವಿ. ಸುನಿಲ್‌ ಕುಮಾರ್‌, ಮಾಜಿ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ, ಅದಾನಿ ಗ್ರೂಪ್‌ ಆಡಳಿತ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಯುಎಸ್‌ಎ, ಸತೀಶ್‌ ಪೂಜಾರಿ ದುಬಾೖ, ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಶೇಷಶಯನ ಕಾರಿಂಜ, ಮಾರುತಿ ಮುಖ್ಯ ಅತಿಥಿಗಳಾಗಿದ್ದರು.

ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಸರ್ವೋತ್ತಮ ಕುಂದರ್‌, ಮುಂಬಯಿ ಸಮಿತಿಯ ಅಧ್ಯಕ್ಷ ಸುರೇಂದ್ರ ಎನ್‌. ಸುವರ್ಣ, ಕೋಶಾಧಿಕಾರಿ ಉದಯ ಶಂಕರ್‌, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್‌ ಕುಂದರ್‌, ಮೊಗವೀರ ಮುಂಬಯಿ ಸಭಾದ ಅಧ್ಯಕ್ಷ ಡಿ.ಕೆ. ಕಾಂಚನ್‌, ಮಹಿಳಾ ಸಭಾದ ಅಧ್ಯಕ್ಷೆ ಹರಿಣಾಕ್ಷಿ ಕುಂದರ್‌, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ಎಸ್‌., ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಮಣಿ ವೈ., ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಎಚ್‌.ಎಸ್‌. ಅನಸೂಯಾ ಉಪಸ್ಥಿತರಿದ್ದರು.

ಶಿಲಾನ್ಯಾಸ, ಸಮ್ಮಾನ, ಪ್ರತಿಭಾ ಪುರಸ್ಕಾರ
ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಲಾಲಾಜಿ ಆರ್‌. ಮೆಂಡನ್‌, ಡಾ| ಬಿ.ಆರ್‌. ಶೆಟ್ಟಿ, ಭಾಸ್ಕರ ಶೆಟ್ಟಿ ಯುಎಸ್‌ಎ ಹಾಗೂ ನಿವೃತ್ತ ಶಿಕ್ಷಕರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಬಿ.ಆರ್‌. ಮತ್ತು ಸಿ.ಆರ್‌. ಶೆಟ್ಟಿ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.

ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ್‌ ಆಳ್ವ ಸ್ವಾಗತಿಸಿದರು. ಸಂಚಾಲಕ ಸಂದೀಪ್‌ ಕುಮಾರ್‌ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ, ಕೆ.ಕೆ. ಪೇಜಾವರ ನಿರ್ವಹಿಸಿದರು.

ಸರಕಾರಿ ಶಾಲೆ ಉಳಿಸಲು ಸರಕಾರ ಮುಂದಾಗಲಿ
ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದ ಹಲವು ಶಾಲೆಗಳು ಇಂದು ಸರಕಾರದ ಇಬ್ಬಗೆ ನೀತಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ಬಂದಿರುವುದು ವಿಷಾದನೀಯವಾಗಿದೆ. ಅಂತಹ ಶಾಲೆಗಳನ್ನು ಮೇಲಕ್ಕೆತ್ತುವಲ್ಲಿ ಸರಕಾರ ಮುಂದೆ ಬರಬೇಕು. ಸರಕಾರದಿಂದ ಅಸಾಧ್ಯ ಎನಿಸಿದಲ್ಲಿ ಅಂತಹ ಶಾಲೆಗಳನ್ನು ಖಾಸಗಿಯವರ ಸುಪರ್ದಿಗೆ ನೀಡಿ, ಅವರ ಮೂಲಕ ಶಾಲೆಯ ಬೆಳವಣಿಗೆಗೆ ಮುನ್ನಡಿಯಿಡಬೇಕು. ಈ ವಿಷಯವನ್ನು ಜನಪ್ರತಿನಿಧಿಗಳು ಸರಕಾರಕ್ಕೆ ಮನದಟ್ಟು ಮಾಡಬೇಕು.
-ಡಾ| ಬಿ.ಆರ್‌. ಶೆಟ್ಟಿ ಅಬುಧಾಬಿ, ಅನಿವಾಸಿ ಭಾರತೀಯ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next