Advertisement

ರೈಲಿನಲ್ಲಿ 4 ಲ.ರೂ. ನಗ, ನಗದು ಲೂಟಿ

08:20 AM Aug 07, 2017 | Harsha Rao |

ಉಡುಪಿ: ಥಾಣೆಯಿಂದ ಉಡುಪಿಗೆ ಮತ್ಸಗಂಧ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ದಂಪತಿಗೆ ಅಮಲು ಪದಾರ್ಥ ನೀಡಿ ಸುಮಾರು 4 ಲಕ್ಷ  ರೂ. ಮೌಲ್ಯದ ನಗ, ನಗದು ದೋಚಿ ಪರಾರಿಯಾದ ಘಟನೆ ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗಿನ ಅವಧಿಯಲ್ಲಿ ಕೊಂಕಣ ರೈಲುಮಾರ್ಗದಲ್ಲಿ ಸಂಭವಿಸಿದೆ. ಮೂಲತಃ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಡ್ಮನೆ- ಪಡುಮನೆ ನಿವಾಸಿ, ಥಾಣೆಯಲ್ಲಿ ನೆಲೆಸಿರುವ ಸಂಜೀವ ಶೆಟ್ಟಿ (61) ಹಾಗೂ ಅವರ ಪತ್ನಿ ರತ್ನಾ ಶೆಟ್ಟಿ (56) ನಗ, ನಗದು ಕಳೆದುಕೊಂಡವರು. ಅಮಲು ಪದಾರ್ಥದಿಂದ ಅಸ್ವಸ್ಥಗೊಂಡಿದ್ದ ದಂಪತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ. 

Advertisement

ಪತ್ನಿ ಚಿಕಿತ್ಸೆಗೆಂದು ಹೊರಟಿದ್ದರು
ಸಂಜೀವ ಅವರ ಪತ್ನಿ ರತ್ನಾ ಅವರು ನರ ಸಂಬಂಧಿ ಕಾಯಿಲೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರವಿವಾರದಿಂದ ಮಣಿಪಾಲದಲ್ಲಿ ಚಿಕಿತ್ಸೆಗೆ ದಾಖಲಾಗಲು ಹೊರಟಿದ್ದರು. ಕಳೆದ ಮೇನಲ್ಲಿ  ಈ ಕಾಯಿಲೆಗೆ ವಾರಗಳ ಕಾಲ ಚಿಕಿತ್ಸೆ ಪಡೆದಿದ್ದರು. ಮತ್ತೆ ಚಿಕಿತ್ಸೆ ಪಡೆಯುವುದಕ್ಕಾಗಿ ಈ ದಂಪತಿ ತಮ್ಮ ಬಳಿಯಿದ್ದ ಹಣ, ಚಿನ್ನಾಭರಣವನ್ನು ಹಿಡಿದುಕೊಂಡು ಥಾಣೆಯಿಂದ ಶನಿವಾರ ಸಂಜೆ 3.40ರ ಮತ್ಸ್ಯಗಂಧ ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಉಡುಪಿಗೆ ಹೊರಟಿದ್ದರು.

ಅದೇ ಬೋಗಿಯಲ್ಲಿದ್ದ ತಂಡವೊಂದು ಜ್ಯೂಸ್‌ ಅಥವಾ ಯಾವುದೋ ತಿನ್ನುವ ವಸ್ತುವಿನಲ್ಲಿ  ದಂಪತಿಗೆ ಅಮಲು ಪದಾರ್ಥ ನೀಡಿರ ಬೇಕೆಂದು ಶಂಕಿಸಲಾಗಿದೆ. ಕುಂದಾಪುರ ತಲುಪುವಾಗ ಈ ದಂಪತಿ ಅಸ್ವಸ್ಥರಾಗಿರುವುದು ಗೊತ್ತಾಯಿತು. ಈ ದಂಪತಿಯ ಸೋದರಳಿಯ ಗಣೇಶ್‌ ಶೆಟ್ಟಿ ಅವರ ಪತ್ನಿ ಕಸ್ತೂರಿ ಅವರ ಅಣ್ಣ ಕಡಂದಲೆ ಹರೀಶ್‌ ಶೆಟ್ಟಿ ಕೂಡ ಇದೇ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ರೈಲು ನಿಲ್ದಾಣದಲ್ಲಿ ಭೇಟಿಯಾದಾಗ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸಲಿರುವುದು ತಿಳಿದಿತ್ತು. ಬೆಳಗ್ಗೆ ಹರೀಶ್‌ ಶೆಟ್ಟಿ ಅವರು ಸಂಜೀವ ಅವರನ್ನು ಭೇಟಿಯಾಗಲೆಂದು ಅವರಲ್ಲಿಗೆ ಹೋದಾಗಲೇ ವಿಷಯ ಗೊತ್ತಾಗಿದ್ದು . ಆ ವೇಳೆಗೆ ರೈಲು ಕುಂದಾಪುರ ದಾಟಿತ್ತು. ಬೆಳಗ್ಗೆ 10.30ರ ಸುಮಾರಿಗೆ ಉಡುಪಿಗೆ ತಲುಪುತ್ತಿದ್ದಂತೆ ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರನ್ನೂ ಹರೀಶ್‌ ಶೆಟ್ಟಿ ಅವರು ಉಡುಪಿ ರೈಲ್ವೇ ಪೊಲೀಸರ ನೆರವಿನೊಂದಿಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಪಾನ್‌ಬೀಡ ಅಂಗಡಿ ನಡೆಸುತ್ತಿದ್ದರು
ಸಂಜೀವ ಶೆಟ್ಟಿ ಅವರು ಥಾಣೆಯಲ್ಲಿ ಪಾನ್‌ಬೀಡ ಅಂಗಡಿ ನಡೆಸುತ್ತಿದ್ದರು. ಪತ್ನಿಯ ಚಿಕಿತ್ಸೆಗಾಗಿ ಶನಿವಾರ ಮುಂಬಯಿಯಿಂದ ಊರಿಗೆ ಹೊರಟಿದ್ದರು. ಮೂಲತಃ ಇನ್ನಾದವರಾದ ಸಂಜೀವ ಶೆಟ್ಟಿ ಕಳೆದ ಕೆಲವು ವರ್ಷಗಳಿಂದ ಮುಂಬಯಿಯಲ್ಲಿಯೇ ನೆಲೆಸಿದ್ದರು. ಸಂಜೀವ ಶೆಟ್ಟಿ ಅವರಿಗೆ ಇಬ್ಬರು ಮಕ್ಕಳಿದ್ದು ಅವರೂ ಮುಂಬಯಿಯಲ್ಲಿಯೇ ಇದ್ದಾರೆ. ಪುತ್ರ ಎಂಜಿನಿಯರ್‌ ಆಗಿದ್ದು, ಪುತ್ರಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಯಾಣಿಕರಿಂದ ಹಣ ದೋಚಿದ ಪ್ರಕರಣ ಮಹಾರಾಷ್ಟ್ರದ ಅಂಜನಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ವಾಚ್‌, ಮೊಬೈಲ್‌ ಕೂಡ ಬಿಡಲಿಲ್ಲ
ರೈಲಿನಲ್ಲಿ ಅಮಲು ಪದಾರ್ಥ ನೀಡಿ ಸಂಜೀವ ಶೆಟ್ಟಿ ಅವರ ಬಳಿಯಿದ್ದ ಎಲ್ಲ ವಸ್ತುಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ವಾಚ್‌ ಮತ್ತು ಮೊಬೈಲನ್ನು ಕೂಡ ಬಿಟ್ಟಿರಲಿಲ್ಲ. ದಂಪತಿಯಲ್ಲಿದ್ದ 50 ಸಾವಿರ ರೂ. ಹಣ, 20 ಗ್ರಾಂನ ಬ್ರೇಸ್‌ಲೆಟ್‌, 15 ಗ್ರಾಂನ 3 ಉಂಗುರ, 45 ಸಾವಿರ ರೂ. ಮೌಲ್ಯದ ರ್ಯಾಡೋ ವಾಚ್‌, ಮೊಬೈಲ್‌, ರತ್ನಾ ಶೆಟ್ಟಿ ಅವರ 10 ಗ್ರಾಂನ ಕರಿಮಣಿ, 8 ಗ್ರಾಂನ 2 ಉಂಗುರ, 3 ಗ್ರಾಂನ 4 ಬಳೆ, ಸುಮಾರು 2 ಗ್ರಾಂನ ಕಿವಿಯೋಲೆ ಹಾಗೂ 50 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾರೆ. 

Advertisement

ವ್ಯವಸ್ಥಿತ ಜಾಲದ ಸಂಚು?
ಮುಂಬಯಿನಂತಹ ಮಹಾನಗರಗಳಲ್ಲಿ ಉದ್ಯೋಗದಲ್ಲಿದ್ದು, ಹಣ ಸಂಪಾದಿಸಿ ಊರಿಗೆಂದು ಹೊರಟವರನ್ನು ಟಾರ್ಗೆಟ್‌ ಮಾಡಿ, ಅವರನ್ನು ಪರಿಚಯ ಮಾಡಿಕೊಂಡು ಅಮಲು ಪದಾರ್ಥಗಳನ್ನು ನೀಡಿ ಲೂಟಿ ಮಾಡುವ ವ್ಯವಸ್ಥಿತ ಜಾಲವೇ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ. ಇತ್ತೀಚೆಗಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ರೈಲ್ವೇ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕಿದೆ. 

ಎಚ್ಚೆತ್ತುಕೊಳ್ಳದ ಜನ
ಮಹಾರಾಷ್ಟ್ರದ ರತ್ನಾಗಿರಿ, ಥಾಣೆಯಂತಹ ನಗರಗಳಿಂದ ಊರಿಗೆ ರೈಲಿನಲ್ಲಿ ಸಂಚರಿಸುವಾಗ ಜ್ಯೂಸ್‌, ತಿಂಡಿ- ತಿನಿಸುಗಳಲ್ಲಿ ಅಮಲು ಪದಾರ್ಥ ನೀಡಿ ವಂಚಿಸಿ, ಅವರ ಬಳಿಯಿರುವ ಲಕ್ಷಾಂತರ ರೂ. ಹಣ, ಚಿನ್ನಾಭರಣ ದೋಚಿ ಪರಾರಿಯಾಗುವ ಘಟನೆಗಳು ಈಗ ಪದೇ ಪದೇ ನಡೆಯುತ್ತಿವೆ. ರೈಲ್ವೇ ಇಲಾಖೆ, ಪೊಲೀಸರು ಅಪರಿಚಿತರು ಏನು ಕೊಟ್ಟರೂ ತೆಗೆದುಕೊಳ್ಳಬೇಡಿ ಎಂದು ಆಗಾಗ ಮನವಿ ಮಾಡಿಕೊಂಡರೂ ಜನ ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next