ಇಂದೋರ್:ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಪರಿಣಾಮ ಪೊಲೀಸರು ನಡೆಸಿದ ಗೋಲಿಬಾರ್ ಗೆ ಮೂವರು ರೈತರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ರಾಜ್ಯದ ಹಲವೆಡೆ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ. ಘಟನೆಯಲ್ಲಿ ಮೂವರು ರೈತರು ಗಾಯಗೊಂಡಿದ್ದಾರೆ.
ತಾವು ಬೆಳೆದ ಬೆಳೆಗೆ ಅಧಿಕ ಬೆಲೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮಂದ್ಸೌರ್ ಜಿಲ್ಲೆಯಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಉದ್ರಿಕ್ತ ರೈತರು ಸುಮಾರು 10ಲಾರಿಗಳಿಗೆ ಬೆಂಕಿ ಹಚ್ಚಿದಾಗ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತ್ತು.
ಘಟನಾ ಸ್ಥಳಕ್ಕೆ ಸಿಆರ್ ಪಿಎಫ್ ಹಾಗೂ ಪೊಲೀಸ್ ಪಡೆ ಆಗಮಿಸಿತ್ತು. ಪ್ರತಿಭಟನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪೊಲೀಸರ ಗುಂಡಿಗೆ ಕನ್ನಯ್ಯ ಲಾಲ್ ಪಾಟಿದಾರ್ ಹಾಗೂ ಬಾನ್ಶಿ ಪಾಟಿದಾರ್ ಎಂಬ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ರೈತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಗೋಲಿಬಾರ್ ನಡೆದೇ ಇಲ್ಲ:
ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಗೋಲಿಬಾರ್ ನಡೆಸಿಯೇ ಇಲ್ಲ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹಸಚಿವರು ಹೇಳಿಕೆ ನೀಡಿದ್ದಾರೆ.