Advertisement

4 ಗಂಟೆ ರಾಷ್ಟ್ರೀಯ ಹೆದ್ದಾರಿ ಸ್ತಬ್ಧ: ಸವಾರರ ಪರದಾಟ

06:37 AM Jun 11, 2019 | Team Udayavani |

ಚಿಕ್ಕಬಳ್ಳಾಪುರ: ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಜನಪರವಾದ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ತಿದ್ದುಪಡಿ ಮೂಲಕ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಸಂಖ್ಯೆಯ ರೈತರು ನಗರದ ಹೊರ ವಲಯದ ಚದಲುಪುರ ಸಮೀಪ ಬೆಂಗಳೂರು, ಹೈದರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ 4 ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ರೈತರು ಚದಲುಪುರದ ಹಳೆ ಡೀಸಿ ಕಚೇರಿ ಸಮೀಪ ಹೆದ್ದಾರಿ-7ನ್ನು ಬೆಳಗ್ಗೆ 10 ಗಂಟೆಗೆಲ್ಲಾ ಸಂಪೂರ್ಣ ಬಂದ್‌ ಮಾಡುವ ಮೂಲಕ ಹೆದ್ದಾರಿ ತಡೆದು ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಯುಪಿಎ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತ ಪರವಾಗಿದ್ದು, ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮೈತ್ರಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಪಡಿಸಿಕೊಳ್ಳಲು ಯುಪಿಎ ಅವಧಿಯಲ್ಲಿ ಜಾರಿಗೆ ತಂದಿದ್ದ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ತ ಹರಿಸಿಯಾದರೂ ತಡೆಯುತ್ತೇವೆ: ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, 2014 ರಲ್ಲಿ ಜಾರಿಯಾಗಿದ್ದ ಭೂ ಸ್ವಾಧೀನ ಕಾಯ್ದೆ ರಿಯಲ್‌ ಎಸ್ಟೇಟ್‌ ಕುಳಗಳಿಗೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ರೈತರ ಜಮೀನುಗಳನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿತ್ತು. ಆದರೆ ಯುಪಿಎ ಸರ್ಕಾರ ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದು ಜನಪರವಾದ ಭೂ ಸ್ವಾಧೀನ ಕಾಯ್ದೆ ಅನುಷ್ಠಾನಗೊಳಿಸಿತ್ತು.

ಆದರೆ ರಾಜ್ಯದ ಮೈತ್ರಿ ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಮತ್ತೆ ಕಾಯ್ದೆಗೆ ತಿದ್ದುಪಡಿ ತರುವ ಕೆಲಸಕ್ಕೆ ಮುಂದಾಗಿದೆ. ಇದರಿಂದ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರೈತರಿಗೆ ಭೂಮಿ ಉಳಿಸುವ ಕಾನೂನು ತರುವುದರ ಬದಲು ಭೂಮಿ ಕಿತ್ತುಕೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಕಾಯ್ದೆ ತಿದ್ದುಪಡಿ ತರಲು ಅವಕಾಶ ನೀಡುವುದಿಲ್ಲ. ನಾವು ರಕ್ತ ಹರಿಸಿಯಾದರೂ ಸರಿ ಕಾಯ್ದೆ ತಿದ್ದುಪಡಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ವಿ.ಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ರಮಣಾರೆಡ್ಡಿ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಣರೆಡ್ಡಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ, ಗುಡಿಬಂಡೆ ತಾಲೂಕು ಅಧ್ಯಕ್ಷ ರಾಮನಾಥ್‌ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಗಿ ಪೊಲೀಸ್‌ ಭದ್ರತೆ: ಚದಲುಪುರ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಹಮ್ಮಿಕೊಂಡಿದ್ದ ಸ್ಥಳದಲ್ಲಿ ಜಿಲ್ಲೆಯ ಪೊಲೀಸ್‌ ಇಲಾಖೆ, ಅಹಿಕತರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಿತ್ತು. ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್ಗೆ ಕರೆಸಿಕೊಳ್ಳಲಾಗಿತ್ತು.

ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌, ಚಿಂತಾಮಣಿ ಡಿವೈಎಸ್‌ಪಿ ಶ್ರೀನಿವಾಸ್‌ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವೃತ್ತಗಳ ಆರಕ್ಷಕ ನೀರೀಕ್ಷಕರು, ಉಪ ನಿರೀಕ್ಷಕರು, ಎರಡು ಕೆಎಸ್‌ಆರ್‌ಪಿ ತುಕಡಿ, ಎರಡು ಡಿಆರ್‌ಗಳನ್ನು ನಿಯೋಜಿಸಲಾಗಿತ್ತು.

ಟ್ರ್ಯಾಕ್ಟರ್‌, ಜಾನುವಾರು ತಂದ ನಿಲ್ಲಿಸಿದ ರೈತರು: ರಾಷ್ಟ್ರೀಯ ಹೆದ್ದಾರಿ ತಡೆಗೆ ರೈತ ಸಂಘದ ಕಾರ್ಯಕರ್ತರು ಹತ್ತಾರು ಟ್ರ್ಯಾಕ್ಟರ್‌ ಹಾಗೂ ಜಾನುವಾರುಗಳನ್ನು ತಂದು ಹೆದ್ದಾರಿಯಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು. 4 ಗಂಟೆಗಳ ಕಾಲ ಹೆದ್ದಾರಿ ಸ್ಥಬ್ದವಾಗಿತ್ತು.

ಬೆಂಗಳೂರು ಹೈದರಾಬಾದ್‌ ನಡುವಿನ ಹೆದ್ದಾರಿ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತಿತ್ತು. ಆದರೆ ಹೆದ್ದಾರಿ ತಡೆಯಿಂದಾಗಿ ವಾಹನಗಳ ಸುಳಿವು ಇಲ್ಲದೇ ಬಿಕೋ ಎನ್ನುತತ್ತು. ಪೊಲೀಸರು ಪ್ರತಿಭಟನಾನಿರತ ರೈತರನ್ನು ಮನವೊಲಿಸುವ ಕಾರ್ಯ ಮಾಡಿದರೂ ಪ್ರಯೋಜನವಾಗಲಿಲ್ಲ. ಕೆಲವೊಮ್ಮೆ ರೈತರು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ವಾಗ್ಧಾದ ನಡೆದರೂ ಪೊಲೀಸರು ಮಾತ್ರ ರೈತರ ಪ್ರತಿಭಟನೆ ಮುಂದೆ ಅಸಹಾಯಕರಾಗಿ ನಿಂತಿದ್ದರು.

ಮಾಧ್ಯಮದವರ ಮೇಲೆ ರೈತರ ಹಲ್ಲೆ: ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವರದಿಗಾಗಿ ತೆರಳಿದ್ದ ಮಾಧ್ಯಮದವರ ಮೇಲೆಯೇ ರೈತ ಸಂಘದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಚದಲುಪುರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸುತ್ತಿದ್ದ ರೈತ ಸಂಘಟನೆಯ ಕಾರ್ಯಕರ್ತರಲ್ಲಿ ದಾರಿ ಬಿಡುವಂತೆ ಖಾಸಗಿ ಸುದ್ದಿವಾಹಿನಿಗಳ ವರದಿಗಾರರು ಹಾಗೂ ಕ್ಯಾಮೆರಾಮೆನ್‌ಗಳು ಕೇಳಿಕೊಂಡಿದ್ದು, ಈ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ವಿಷಯ ತಿಳಿದು ಜಿಲ್ಲಾ ಕೇಂದ್ರದ ಪತ್ರಕರ್ತರು ಸ್ಥಳಕ್ಕೆ ತೆರಳಿ ರೈತ ಸಂಘಟನೆ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಪತ್ರಕರ್ತರ ಬಳಿ ಕ್ಷಮೆಯಾಚಿಸಿದ ಬಳಿಕ ಹಲ್ಲೆ ಪ್ರಕರಣ ಸುಖಾಂತ್ಯಗೊಂಡಿತು.

ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 4 ಗಂಟೆಗಳ ಕಾಲ ರಸ್ತೆ ತಡೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ಚಿಕ್ಕಬಳ್ಳಾಪುರದ ಮೂಲಕ ಬೆಂಗಳೂರು ಹಾಗೂ ಹೈದರಾಬಾದ್‌ ನಡುವೆ ಸಂಚರಿಸಬೇಕಿದ್ದ ಸಹಸ್ರಾರು ವಾಹನಗಳು ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾಯಿತು. ಇದರಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾಯಿತು.

ಪೊಲೀಸ್‌ ಇಲಾಖೆ ಮುಂಜಾಗ್ರತೆಯಿಂದ ನಂದಿ ಕ್ರಾಸ್‌ನಿಂದ ನಂದಿ ಮೂಲಕ ಜಡಲತಿಮ್ಮನಹಳ್ಳಿ ಮೂಲಕ ನಗರಕ್ಕೆ ಪ್ರವೇಶ ಕಲ್ಪಿಸಲು ಹಲವು ಮಾರ್ಗಗಳಲ್ಲಿ ಸಂಚಾರಕ್ಕೆ ವಾಹನಗಳಿಗೆ ಅನುವು ಮಾಡಿಕೊಟ್ಟಿದ್ದರೂ ಮೊದಲೇ ಕಿಷ್ಕಿಂಧೆಯಂತಿದ್ದ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಪೊಲೀಸರು ಕೂಡ ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.

ಹೆದ್ದಾರಿ ತಡೆಗೆ ಪೊಲೀಸರ ರಕ್ಷಣೆ..!: ಸಾಮಾನ್ಯವಾಗಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ಸ್ಥಳಾಂತರಿಸುವುದು ಮಾಡುತ್ತಾರೆ. ಆದರೆ ಜಿಲ್ಲೆಯಲ್ಲಿ ರೈತರು ನಡೆಸಿದ ರಾಷ್ಟ್ರೀಯ ಹೆದ್ದಾರಿ ತಡೆ ಒಂದು ರೀತಿ ಪೊಲೀಸರ ರಕ್ಷಣೆಯಿಂದಲೇ ನಡೆಯುತ್ತಿದ್ದಂತೆ ಭಾಸವಾಯಿತು.

ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಕೆಲವು ಕಡೆ ಅವೈಜ್ಞಾನಿಕವಾಗಿ ಹೆದ್ದಾರಿಯನ್ನು ಬ್ಯಾರಿಕೇಡ್‌ಗಳ ಮೂಲಕ ಬಂದ್‌ ಮಾಡಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದು ಮಾತ್ರ ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಯಿತು.

ರಾಜ್ಯದ ಮೈತ್ರಿ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯಬೇಕು. ರೈತರ ಒಪ್ಪಿಗೆ ಇಲ್ಲದೇ ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಮುಖ್ಯಮಂತ್ರಿಗಳು ರೈತ ಪರವಾದ ನಿಲುವು ಪ್ರದರ್ಶಿಸಿ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ.
-ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ

Advertisement

Udayavani is now on Telegram. Click here to join our channel and stay updated with the latest news.

Next