ಜಮ್ಮು-ಕಾಶ್ಮೀರ: ಇಲ್ಲಿನ ಕುಲ್ಗಾಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಸೇವೆಗೆ ಹಾಜರಾದ ಸಿಬ್ಬಂದಿ: ಸಾರಿಗೆ ಬಸ್ ಸಂಚಾರ ಆರಂಭ
ಪೊಲೀಸರ ಮಾಹಿತಿ ಪ್ರಕಾರ, ದಾಮ್ಜೆನ್ ಪ್ರದೇಶದ ಮಹಿಳೆಯೊಬ್ಬಳ ನೆರವಿನೊಂದಿಗೆ ಬೋನಿಗಾಮ್ ಖ್ವಾಜಿಗುಂಡ್ ಎಂಬಲ್ಲಿ ಮೂವರು ವ್ಯಕ್ತಿಗಳು ಸೇರಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಖ್ವಾಜಿಗುಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ದೂರಿನ ಆಧಾರದ ಮೇಲೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆಗ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಕಾಯ್ದೆಯಂತೆ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ವರದಿ ವಿವರಿಸಿದೆ.
ಆರೋಪಿಗಳನ್ನು ಝಹೂರ್ ಅಹ್ಮದ್ ಮೀರ್, ಏಜಾಜ್ ಅಹ್ಮದ್ ಶಾ, ಕಿಫಾಯತ್ ಅಹ್ಮದ್ ಮಲಿಕ್ ಮತ್ತು ಶಬ್ರೂಝಾ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿಲ್ಲ ಎಂದು ಎಎನ್ ಐ ತಿಳಿಸಿದೆ.
ಪ್ರಾಥಮಿಕ ತನಿಖೆಯಲ್ಲಿ, ಕೃತ್ಯ ಎಸಗಿದ ಸಂದರ್ಭದಲ್ಲಿ ಆರೋಪಿ ಪೊಲೀಸ್ ಕರ್ತವ್ಯದಲ್ಲಿ ಇರಲಿಲ್ಲವಾಗಿತ್ತು. ರಜೆ ಮೇಲೆ ಇದ್ದ ವೇಳೆ ಈ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.