ಮುಂಬಯಿ: ಪಾಳುಬಿದ್ದ ಆಸ್ಪತ್ರೆಯ ಕಟ್ಟಡದ ಒಳಗಡೆ ನಾಲ್ಕು ಶವಗಳು ಪತ್ತೆಯಾಗಿರುವ ಘಟನೆ ಮುಂಬಯಿಯ ಕಾಂದಿವಲಿ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಕುಷ್ಟಗಿ: 2 ಲಕ್ಷ ರೂ. ನಗದು ಕರ್ಣಾಟಕ ಬ್ಯಾಂಕ್ ಮುಂದೆ ಕಳವು !
ನಿರ್ವಹಣೆ ಇಲ್ಲದ ಆಸ್ಪತ್ರೆಯ ಕಟ್ಟಡದಲ್ಲಿ ಇವರು ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 15 ವರ್ಷಗಳ ಹಿಂದೆಯೇ ಆಸ್ಪತ್ರೆಯನ್ನು ಮುಚ್ಚಲಾಗಿತ್ತು ಎಂದು ವರದಿ ತಿಳಿಸಿದೆ.
ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಸೂಸೈಡ್ ನೋಟ್ಸ್ ಪತ್ತೆಯಾಗಿದೆ. ಆಸ್ಪತ್ರೆ ಕಟ್ಟಡದ ಎರಡನೇ ಅಂತಸ್ತಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದ್ದು, ಮೊದಲ ಮಹಡಿಯಲ್ಲಿ ಇಬ್ಬರು ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಕಿರಣ್ ದಳ್ವಿ ಹಾಗೂ ಆತನ ಇಬ್ಬರು ಪುತ್ರಿಯರಾದ ಮುಸ್ಕಾನ್ ಮತ್ತು ಭೂಮಿ ಎಂದು ಗುರುತಿಸಲಾಗಿದ್ದು, ನಾಲ್ಕನೇ ವ್ಯಕ್ತಿ ಶಿವದಯಾಳ್ ಸೇನ್ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.