Advertisement

ತಲ್ಲೂರಿನ ಸಬ್ಲಾಡಿಯಲ್ಲಿ ವಾರಕ್ಕೊಮ್ಮೆ 4 ಕೊಡ ನೀರು

01:17 AM May 10, 2019 | Team Udayavani |

ಕುಂದಾಪುರ: ಪಂಚಾಯತ್‌ನಿಂದ ನಳ್ಳಿ ನೀರಿನ ಸಂಪರ್ಕ ಇದೆ. ಒಮ್ಮೆ ರಸ್ತೆ ಕಾಮಗಾರಿ ವೇಳೆ ಪೈಪ್‌ಲೈನ್‌ ಹಾಳಾಯಿತು. ಅದರ ದುರಸ್ತಿಯಾದ ಮೇಲೆ ದೂರವಾಣಿ ಕೇಬಲ್‌ ಕಾಮಗಾರಿಗಾಗಿ ಪೈಪ್‌ಲೈನ್‌ ತುಂಡಾಯಿತು. ಅದು ಸರಿಯಾದ ಬಳಿಕ ತೋಡು ದುರಸ್ತಿಗಾಗಿ ನಳ್ಳಿ ಸಂಪರ್ಕ ಕಡಿಯಿತು. ಅದೆಲ್ಲ ಸರಿಯಾದ ಮೇಲೆ ಬೇಸಗೆಯ ಪರಿಣಾಮದಿಂದ ನಳ್ಳಿಯಲ್ಲಿ ನೀರು ಬರುವುದೇ ನಿಂತಿತು. ಹಾಗಾಗಿ ನಮಗೆ ವರ್ಷದಲ್ಲಿ ನಳ್ಳಿಯಲ್ಲಿ ನೀರಿಗಿಂತ ಗಾಳಿ ಬಂದದ್ದೇ ಜಾಸ್ತಿ ಎನ್ನುತ್ತಾರೆ ಸಬ್ಲಾಡಿಯ ಮಂಜಪ್ಪ ಪೂಜಾರಿ.

Advertisement

ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಸಬ್ಲಾಡಿಯಲ್ಲಿ 15ರಷ್ಟು ಮನೆಗಳಿಗೆ ನೀರಿನ ಸಮಸ್ಯೆಯಿದೆ. ಉದಯವಾಣಿ ಜಲಕ್ಷಾಮದ ಕುರಿತು ಸಾಕ್ಷಾತ್‌ ವರದಿಗೆ ತೆರಳಿದಾಗ, ನೀರಿನ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮಂದಿ ಬಿರು ಬೇಸಗೆಯಲ್ಲಿ ನೀರಿಲ್ಲದೇ ತಾವು ಅನುಭವಿಸುವ ಕಷ್ಟವನ್ನು ತೆರೆದಿಟ್ಟರು.

ನೀರಿಲ್ಲದೇ ಒಗೆಯಲು ಹಾಕಿದ ಬಟ್ಟೆ ರಾಶಿ ಬಿದ್ದುದನ್ನು, ಪಾತ್ರೆಪಗಡೆಗಳಲ್ಲಿ ನೀರು ಸಂಗ್ರಹಿಸಿ ಇಟ್ಟದ್ದು ಖಾಲಿಯಾದುದನ್ನು ನೋಡಿ ಎನ್ನುತ್ತಾರೆ.

ಮನೆಮಂದಿಗೇ ನೀರಿಲ್ಲ, ಇನ್ನು ನೆಂಟರಿಷ್ಟರು ಬಂದರೆ ಏನು ಮಾಡಬೇಕೆಂದು ಪ್ರಶ್ನಿಸುತ್ತಾರೆ.

ಬಾವಿಗಳಲ್ಲಿ ನೀರಿಲ್ಲ
ಮನೆಗೆ ಎರಡು ಬಾವಿಯಿದ್ದರೂ ಒಂದರಲ್ಲಿ ನೀರಾರಿದೆ. ಇನ್ನೊಂದರಲ್ಲಿ ಕೆಂಪು ನೀರಿದೆ. ಹಾಗಾಗಿ ಎರಡೂ ಬಳಕೆಗಿಲ್ಲ ಎನ್ನುತ್ತಾರೆ ಅಕ್ಕಯ ಪೂಜಾರ್ತಿ. ನಮ್ಮ ಮನೆಯಲ್ಲಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ನಡೆಸಲು ನೀರಿಲ್ಲ. ಕೊನೆಗೆ ಟ್ಯಾಂಕರ್‌ ಮೂಲಕ ನೀರು ತಂದು ಅಡುಗೆ ವ್ಯವಸ್ಥೆ ಮಾಡ ಬೇಕಾಗಿ ಬಂತು. ಕೈ ತೊಳೆಯುವಾಗಲೂ ನೀರಿಲ್ಲದ ಎಚ್ಚರಿಕೆ ನೀಡುತ್ತಲೇ ಬರಬೇಕಾಯಿತು ಎನ್ನುತ್ತಾರೆ ಪದ್ದು ಪೂಜಾರ್ತಿ. ನಳ್ಳಿ ನೀರು ವಾರಕ್ಕೊಮ್ಮೆ ಬರುತ್ತದೆ. ಕೆಲವೊಮ್ಮೆ ವಾರಕ್ಕೊಮ್ಮೆ ಬರುವುದಾದರೂ ಕೇವಲ 4-5 ಕೊಡ ನೀರಷ್ಟೇ ದೊರೆಯುತ್ತದೆ. ಹಿಡಿದಿಟ್ಟರೆ ಬಂತು ಇಲ್ಲದಿದ್ದರೆ ನೀರಿಲ್ಲ ಎಂದು ಧ್ವನಿಗೂಡಿಸುತ್ತಾರೆ ಲಲಿತಾ ಪೂಜಾರ್ತಿ.

Advertisement

ಈ ಭಾಗದ ಸಂಜೀವ ನಾಯ್ಕ, ಸೀತಾ, ಚನ್ನಮ್ಮ, ಮುತ್ತು ಪೂಜಾರ್ತಿ ಮೊದಲಾದವರ ಮನೆಗಳಲ್ಲೂ ನೀರಿನ ಕೊರತೆಯಿದೆ. ಪದ್ದು ಪೂಜಾರ್ತಿ ಅವರ ಮನೆಗೆ ಸುಮಾರು ಅರ್ಧ ಮೈಲು ದೂರದ ಮಂಜು ಪೂಜಾರಿ ಅವರ ಬಾವಿಯಿಂದ ನೀರು ತರುವ ಅನಿವಾರ್ಯ ಇದೆ.

ವಾರಾಹಿ ನದಿ ಈ ಭಾಗದಲ್ಲಿದೆ. ಆದರೆ ಉಪ್ಪು ನೀರಾದ ಕಾರಣ ಕುಡಿಯುವಂತಿಲ್ಲ. ಸುಮಾರು ನೂರಕ್ಕೂ ಅಧಿಕ ಮನೆಗಳು ಈ ಹೊಳೆಬದಿಯಲ್ಲಿವೆ. ಆದರೆ ಯಾರಿಗೂ ಕುಡಿಯುವ ನೀರಿನ ಮಟ್ಟಿಗೆ ನದಿ ನೀರು ಪ್ರಯೋಜನ ಇಲ್ಲ.

ಸಮಸ್ಯೆ
ತಲ್ಲೂರಿನಲ್ಲಿ ಕೋಟೆಬಾಗಿಲು, ಪಾರ್ತಿಕಟ್ಟೆ, ಹೊಸ್ಮಠ, ಹೊರ್ಲಿಬೆಟ್ಟು, ರಾಜಾಡಿ, ನಟ್ಟಿಬೈಲು, ಪಿಂಗಾಣಿಗುಡ್ಡೆ, ಚಿತ್ತೇರಿಮಕ್ಕಿ, ಕಡಮಾರು, ನಾಯರ ಬಾಳು, ಬೆಂಡೆಹಿತ್ಲು, ಮಾರನಮನೆ ಮುಂತಾದ ಸಣ್ಣ ಸಣ್ಣ ಕೇರಿಗಳಿವೆ. ಈ ಪೈಕಿ ಬೇಡರಕೊಟ್ಟಿಗೆ, ಬಾಳೆಹಿತ್ಲು, ತಂತ್ರಿಬೆಟ್ಟು, ಮಾರ್ನಮನೆ ವಠಾರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.

ಇಡೀ ತಲ್ಲೂರು ಗ್ರಾಮದಲ್ಲಿ ತಲ್ಲೂರಿನಿಂದ ಪಾರ್ಪಿಕಟ್ಟೆಯ 1 ಕಿ.ಮೀ. ಪ್ರದೇಶದಲ್ಲಿ ಮಾತ್ರ ಸಿಹಿನೀರು ದೊರೆಯುವುದು. ಇದು ಪಂಚಾಯತ್‌ನ 6 ಸಾವಿರ ಜನಸಂಖ್ಯೆಗೆ ಪೂರೈಕೆ ಯಾಗಬೇಕು. ಸಬ್ಲಾಡಿ, ಕೋಟೆಬಾಗಿಲು ಸೇರಿದಂತೆ ಇತರ ಎಲ್ಲ ಕಡೆ ಉಪ್ಪುನೀರು. ತಲ್ಲೂರಿನಲ್ಲಿ 200, ಉಪ್ಪಿನಕುದ್ರುವಿನಲ್ಲಿ 300ರಷ್ಟು ನಳ್ಳಿ ಸಂಪರ್ಕಗಳಿವೆ. ನೀರು ಸರಬರಾಜಿಗಾಗಿ 6 ಬೃಹತ್‌ ಟ್ಯಾಂಕ್‌ಗಳಿವೆ.

ವಾರ್ಡ್‌ ಜನರ ಬೇಡಿಕೆ
– ಟ್ಯಾಂಕರ್‌ ನೀರು ಸರಬರಾಜು ಆರಂಭಿಸಬೇಕು.
– ಟ್ಯಾಂಕರ್‌ ನೀರಿಗೆ ಸಮಯ ನಿಗದಿ ಮಾಡಬೇಕು.
– ನಳ್ಳಿ ನೀರು ಸಮರ್ಪಕವಾಗಿ ವಿತರಿಸಬೇಕು.

ದಿನಕ್ಕೆ 6 ಸಾವಿರ ಲೀ. ನೀರು
ಬೇಡರಕೊಟ್ಟಿಗೆ, ಬಾಳೆಹಿತ್ಲು, ತಂತ್ರಿಬೆಟ್ಟು, ಮಾರ್ನಮನೆ ವಠಾರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ದಿನಕ್ಕೆ 6 ಸಾವಿರ ಲೀ. ನೀರು 2 ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಬೇಡಿಕೆ ಬಂದಲ್ಲಿಗೆ ಯಾವುದೇ ತಾರತಮ್ಯ ಮಾಡದೇ ನೀರು ವಿತರಿಸಲಾಗುತ್ತಿದೆ. ನಳ್ಳಿ ನೀರಿನ ಸಂಪರ್ಕ ಇರುವ ಸಬ್ಲಾಡಿ ಪ್ರದೇಶದಿಂದ ದೂರು ಬಂದಿಲ್ಲ.
-ನಾಗೇಂದ್ರ ಜೆ., ಪಿಡಿಒ, ತಲ್ಲೂರು

ದಿನಕ್ಕೊಮ್ಮೆಯಾದರೂ ನೀರು ಕೊಡಲಿ
ದಿನಕ್ಕೊಮ್ಮೆಯಾದರೂ ಕುಡಿಯಲು ತಕ್ಕಷ್ಟು ನೀರು ನಳ್ಳಿಯಲ್ಲಿ ಬರುವಂತಾಗಲಿ. ನಳ್ಳಿಯಲ್ಲಿ ನೀರಿಲ್ಲದಿದ್ದರೆ ಟ್ಯಾಂಕರ್‌ ಮೂಲಕ ಶುದ್ಧ ನೀರು ಕೊಡಲಿ.
-ನಾರಾಯಣ ಪೂಜಾರಿ, ಸಬ್ಲಾಡಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next