ವಿಧಾನ ಪರಿಷತ್ತು: ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿದ್ದ ನೋಂದಣಿ (ಕರ್ನಾಟಕ ತಿದ್ದುಪಡಿ ) ವಿಧೇಯಕ -2024, ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಸೇರಿ ಒಟ್ಟು ನಾಲ್ಕು ವಿಧೇಯಕಗಳು ಪರಿಷತ್ತಿನಲ್ಲಿ ಗುರುವಾರ ಅಂಗೀಕಾರಗೊಂಡವು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಮುದ್ರಾಂಕ ತಿದ್ದುಪಡಿ ಚರ್ಚೆಗಳ ಬಳಿಕ ಅಂಗೀಕಾರ ಪಡೆದವು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಡಿಸಿದ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕದ ಮೇಲೆ ಆಡಳಿತ ಮತ್ತು ವಿರೋಧಪಕ್ಷದ 17 ಸದಸ್ಯರು ಮಾತನಾಡಿ, ತಿದ್ದುಪಡಿ ವಿಧೇಯಕದಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ಬಹುತೇಕ ಸದಸ್ಯರು ತಿದ್ದುಪಡಿ ಕಾಯ್ದೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ದುರಾಡಳಿತ ಮಾಡುವವರೂ ಇದ್ದಾರೆ. ದುರಾಡಳಿತ ನಡೆಸಿದ ಪೊಲೀಸ್ ಅಧಿಕಾರಿಗಳನ್ನು 2 ವರ್ಷ ಒಂದೇ ಕಡೆ ಬೇರೂರಲು ಬಿಡಬಾರದು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದಲ್ಲಿ ಅವಕಾಶವಿರುವ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಾಚರಣೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಕನಿಷ್ಟ ಅವಧಿಯನ್ನು ಒಂದು ವರ್ಷದಿಂದ 2 ವರ್ಷಗಳಿಗೆ ವಿಸ್ತರಿಸುವುದರಿಂದ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಸಾರ್ವಜನಿಕವಾಗಿ ಉತ್ತಮ ಬಾಂಧವ್ಯ ನಿರ್ಮಿಸಲು ಮತ್ತು ಅಪರಾಧವನ್ನು ಪತ್ತೆ ಹೆಚ್ಚಲು ಅನುಕೂಲವಾಗುವುದು ಸೇರಿದಂತೆ ಅಂಶ ಉತ್ತಮ ಅಂಶಗಳು ಈ ಕಾಯ್ದೆಯಲ್ಲಿವೆ. ಈ ಎಲ್ಲಾ ವಿಧೇಯಕಗಳ ಮೇಲೆ ಒಟ್ಟು 55 ಸದಸ್ಯರು ಮಾತನಾಡಿದರು.