ಮಂಗಳೂರು : ತಾಲೂಕಿನ ಉಳಾಯಿಬೆಟ್ಟು ಸಮೀಪದ ಪರಾರಿಯ ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷ ಪ್ರಾಯದ ಬಾಲಕಿಯನ್ನು ಕೊಲೆಗೈದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಬಂಧಿತರು ಮಧ್ಯಪ್ರದೇಶದ ಮೂಲದ ಜಯ ಸಿಂಗ್ (21)ಮುನೀಮ್ ಸಿಂಗ್(20) , ಮನೀಶ್ ತಿರ್ಕಿ(33 ) ಮತ್ತು ಝಾರ್ಖಂಡ್ ಮೂಲದ ಮುಖೇಶ್ ಸಿಂಗ್ (20) ಎನ್ನುವವರಾಗಿದ್ದಾರೆ.
ಬಂಧಿತ ಆರೋಪಿಗಳು ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದವರು. ಮಧ್ಯಪ್ರದೇಶದ ಮೂಲದ ಮೂವರು ಮತ್ತು ಝಾರ್ಖಂಡ್ ಮೂಲದ ಓರ್ವ ಕಾರ್ಮಿಕ ಬಾಲಕಿಯನ್ನು ತಮ್ಮ ಕೋಣೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ರಕ್ತಸ್ರಾವ ವಾಗುತ್ತಿದ್ದ ವೇಳೆ ಕತ್ತು ಹಿಸುಕಿ ಕೊಲೆಗೈದು ಮೋರಿಯಲ್ಲಿ ಬಿಸಾಕಿದ್ದರು ಎಂದು ಪೊಲೀಸರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆಸಿದ ಬಳಿಕ ಇಬ್ಬರು ಆರೋಪಿಗಳು ಪುತ್ತೂರಿಗೆ ತೆರಳಿದ್ದು, ಇನ್ನಿಬ್ಬರು ಬಾಲಕಿಯನ್ನು ಹುಡುಕಾಡುವ ವೇಳೆ ತಾವೂ ಬಂದು ಯಾರಿಗೂ ಗೊತ್ತಾಗದಂತೆ ನಟಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನವೆಂಬರ್ 21 ರ ರವಿವಾರ ಸಂಜೆ ಬೆಳಕಿಗೆ ಬಂದ ಪ್ರಕರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು.
ಗುರುಪುರ ಸೇತುವೆ ಬಳಿಯ ಪರಾರಿ ಕ್ರಾಸ್‌ನಲ್ಲಿ ‘ರಾಜ್ ಟೈಲ್ಸ್’ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕುಟುಂಬದ ಮಹಿಳೆಯ 8 ವರ್ಷದ ಹೆಣ್ಣು ಮಗು ರವಿವಾರ ಸಂಜೆ 4 ಗಂಟೆಯಿಂದ ದಿಢೀರ್ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಸಂಜೆ 6 ಗಂಟೆ ಸುಮಾರಿಗೆ ಕಾರ್ಖಾನೆಯ ಸಮೀಪದ ಮೋರಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಹಲವು ಮಂದಿ ಯುವಕರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು.