ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿದ ಐಜಿಪಿ ಎಸ್. ರವಿ ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದು ಅದರಲ್ಲಿ ಪ್ರಮುಖ ಆರೋಪಿ ಕ್ರಷರ್ ಮಾಲೀಕ ಶಿವಮೊಗ್ಗ ರವೀಂದ್ರ ನಗರದ ಬಿ.ವಿ.ಸುಧಾಕರ (57), ಕ್ವಾರಿ ಸೂಪರ್ವೈಸರ್ ವಿನೋಬ ನಗರದ ನರಸಿಂಹ(39), ಬ್ಲಾಸ್ಟರ್ ಗಳಾದ ಚಾಲುಕ್ಯ ನಗರದ ಮುಮ್ತಾಜ್ ಅಹಮದ್ (50) ಮತ್ತು ಭದ್ರಾವತಿ ಜಂಬರಘಟ್ಟದ ರಶೀದ್ (44) ಬಂಧಿತರು.
ಸುಧಾಕರ ಮತ್ತು ನರಸಿಂಹ ಸ್ಫೋಟಕವನ್ನು ತರಿಸಿದ್ದರು ಎನ್ನಲಾಗಿದ್ದು ರಶೀದ್, ಮುಮ್ತಾಜ್ ಅಹಮದ್ ಬ್ಲಾಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ
ಘಟನೆಯಲ್ಲಿ ಮೃತಪಟ್ಟ ಭದ್ರಾವತಿಯ ಪ್ರವೀಣ ಸ್ಫೋಟಕ ತರಿಸುವ ವಿಷಯದಲ್ಲಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದ ಎಂದಿದ್ದಾರೆ, ಎಷ್ಟು ಪ್ರಮಾಣದ ಸ್ಫೋಟಕ ತಂದಿದ್ದರು ಮತ್ತು ಎಲ್ಲಿಂದ ತಂದಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಘಟನೆಯಲ್ಲಿ ಎರಡು ವಾಹನ ಸುಟ್ಟು ಹೋಗಿವೆ. ಆ ವಾಹನಗಳ ಸಂಖ್ಯೆ ತಿಳಿದು ಬರಬೇಕಿದೆ, ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ.
ಈ ಹಿಂದೆ ಜಿಲ್ಲೆಯ ವಿವಿಧ ಕ್ವಾರಿ ಮತ್ತು ಕ್ರಷರ್ ಗಳ ಮೇಲೆ ದಾಳಿ ಮಾಡಿ 21ಪ್ರಕರಣ ದಾಖಲಿಸಲಾಗಿದೆ, ತನಿಖೆ ಇನ್ನೂ ಮುಂದುವರಿದಿದ್ದು ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ತನ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ತಿಳಿದು ಬರಲಿದೆ ಎಂದರು.