ಬಾಗಲಕೋಟೆ: ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಪ್ರಸಕ್ತ 2018-19ನೇ ಸಾಲಿನಲ್ಲಿ 41.91 ಕೋಟಿ ಲಾಭ ಗಳಿಸಿದ್ದು, ಅದರಲ್ಲಿ ನಿಯಮಾನುಸಾರ ತೆರಿಗೆ, ಇತರೆ ಅವಶ್ಯಕ ಶಾಸನಬದ್ಧ ಅನವು ಕಲ್ಪಿಸಿದ ಬಳಿಕ ನಿವ್ವಳವಾಗಿ 4.94 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅಜಯಕುಮಾರ ಸರನಾಯಕ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2003ರಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್‌ನಿಂದ ಪ್ರತ್ಯೇಕಗೊಂಡು, ಸ್ವತಂತ್ರ್ಯವಾದ ಬಾಗಲಕೋಟೆ ಡಿಸಿಸಿ ಬ್ಯಾಂಕ್, ಪ್ರಸ್ತುತ 46 ಶಾಖೆ, 262 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೊಂದಿದೆ. ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದು, ಜಿಲ್ಲೆಯ 1,313 ವಿವಿಧ ಸಹಕಾರಿ ಸಂಘಗಳು ಬ್ಯಾಂಕಿನ ಸದಸ್ಯತ್ವ ಹೊಂದಿವೆ ಎಂದರು.
ಮೂರು ಸಾವಿರ ದುಡಿಯುವ ಬಂಡವಾಳ: ಬ್ಯಾಂಕ್ 121.26 ಕೋಟಿ ಶೇರು ಬಂಡವಾಳ, 200.11 ಕೋಟಿ ನಿಧಿ, 2145.61 ಕೋಟಿ ಠೇವಣಿ ಹೊಂದಿದ್ದು, 663.28 ಕೋಟಿ ಸಾಲ ಹೊಂದಿದೆ. ವರ್ಷಾಂತ್ಯಕ್ಕೆ 2250.49 ಕೋಟಿಯಷ್ಟು ಸರ್ಕಾರ ಹಾಗೂ ಸೂಚಿತ ಸಂಸ್ಥೆಗಳಲ್ಲಿ ವಿವೇಕಯುಕ್ತವಾಗಿ ವಿನಿಯೋಗ ಮಾಡಲಾಗಿದೆ. ಸದ್ಯ 3174.61 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಆರಂಭದಿಂದಲೂ ಲಾಭದಲ್ಲಿದೆ ಎಂದು ತಿಳಿಸಿದರು.
2018-19ನೇ ಸಾಲಿನಲ್ಲಿ ಜಿಲ್ಲೆಯ 1,94,228 ರೈತರಿಗೆ 1045.32 ಕೋಟಿ ಬೆಳೆಸಾಲ, 778 ರೈತರಿಗೆ ರೂ. 53.28 ಕೋಟಿ ಕೃಷಿ ಚಟುವಟಿಕೆಗಳಾದ ಪೈಪ್‌ಲೈನ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ಭೂ ಅಭಿವೃದ್ಧಿ ಸಹಿತ ವಿವಿಧ ಕಾರಣಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.
2250.49 ಕೋಟಿ ಸಾಲದ ಬೈಕಿ, 988.71 ಕೋಟಿ ಬೆಳೆ ಸಾಲ, ರೂ. 211.87 ಕೋಟಿ ಮಾಧ್ಯಮಿಕ ಕೃಷಿ ಸಾಲ ಹಾಗೂ 1049.91 ಕೋಟಿ ಕೃಷಿಯೇತರ ಸಾಲ ಹೊರ ಬಾಕಿ ಇದೆ. ಒಟ್ಟು ಸಾಲ ಬಾಕಿಯಲ್ಲಿ ಕೃಷಿ ಸಾಲದ ಪ್ರಮಾಣ ಶೇ.59.35ರಷ್ಟಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೂ 904.01 ಕೋಟಿ ಸಾಲ ನೀಡಿದ್ದು, ಬಾದಾಮಿ ಶುಗರ್ ಮತ್ತು ಮನಾಲಿ ಶುಗರ್ ಸಾಲ ಮರು ಪಾವತಿಯಲ್ಲಿ ಕಟಬಾಕಿಯಾಗಿವೆ ಎಂದರು.
1,40,732 ರೈತರ ಸಾಲ ಮನ್ನಾ: ಸಮ್ಮಿಶ್ರ ಸರ್ಕಾರದಲ್ಲಿ ರೈತರ ಒಂದು ಲಕ್ಷ ರೂ. ವರೆಗೆ ಸಹಕಾರಿ ಸಂಘಗಳ ಸಾಲ ಮನ್ನಾ ಯೋಜನೆಯಡಿ ನಮ್ಮ ಜಿಲ್ಲೆಯ 1,40,732 ರೈತರು ಫಲಾನುಭವಿಗಳಾಗಿದ್ದು, ಒಟ್ಟು 759.98 ಕೋಟಿ ಸಾಲ ಮನ್ನಾ ಆಗಿದೆ. ಈಗಾಗಲೇ 61,471 ರೈತರಿಗೆ 320.26 ಕೋಟಿ ಸಾಲ ಮನ್ನಾ ಹಣ ಬಿಡುಗಡೆಯಾಗಿದ್ದು, 439.72 ಕೋಟಿ ಬಾಕಿ ಇದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಸಾಲ ಮನ್ನಾ ಯೋಜನೆಯ ಹಣ ಬಂದಿಲ್ಲ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಶಿವಾನಂದ ಉದಪುಡಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ದೇಸಾಯಿ ಉಪಸ್ಥಿತರಿದ್ದರು.