Advertisement

4.69 ಲಕ್ಷ ಮೌಲ್ಯದ ಮದ್ಯ ಜಪ್ತಿ: 21 ಜನ ವಶಕ್ಕೆ

03:48 PM Mar 26, 2019 | Team Udayavani |
ಬೀದರ: ಅಬಕಾರಿ ಇಲಾಖೆಯಿಂದ ಜಿಲ್ಲೆಯಲ್ಲಿ ವಿವಿಧೆಡೆ ಮಾ.19ರಿಂದ ಮಾ.24ರ ವರೆಗೆ 99 ಕಡೆಗಳಲ್ಲಿ ದಾಳಿ
ನಡೆಸಿ ಸುಮಾರು 4,69,807 ರೂ. ಮೌಲ್ಯದ ಮದ್ಯ ಜಪ್ತಿ ಮಾಡಿಕೊಂಡು, 21 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಅಬಕಾರಿ ಇಲಾಖೆಯ ಬೀದರ ಉಪ ಆಯುಕ್ತ ಬಿ.ಶಿವಪ್ರಸಾದ್‌ ನೇತೃತ್ವದಲ್ಲಿ ದಾಳಿಗಳನ್ನು ನಡೆಸಲಾಗಿದೆ.
ವಿವಿಧೆಡೆ ನಡೆದ ದಾಳಿಯಿಂದ 27 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು 21
ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಒಟ್ಟಾರೆ 232.750 ಲೀಟರ್‌ ಮದ್ಯ, 187.320 ಲೀಟರ್‌ ಬೀರ್‌, 14,000 ಲೀಟರ್‌ ಕಲಬೆರಕೆ ಸೇಂದಿ, ಒಂದು ನಾಲ್ಕು ಚಕ್ರ ವಾಹನ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿರುವ ಒಟ್ಟಾರೆ ಮುದ್ದೇಮಾಲಿನ ಮೌಲ್ಯ 4,69,807 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿಗಳನ್ನು ಸಜ್ಜುಗೊಳಿಸಿದ್ದು, ದಿನದ 24 ಗಂಟೆ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಅಬಕಾರಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಅನುವಾಗುವಂತೆ, ಚುನಾವಣಾ ಸಮಯದಲ್ಲಿ ಅಕ್ರಮ ಮದ್ಯ, ಮದ್ಯಸಾರ, ಕಳ್ಳಭಟ್ಟಿ ಸಾರಾಯಿ ಹಾಗೂ ಸೇಂದಿ ಇತ್ಯಾದಿ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮುಂತಾದ ಅಬಕಾರಿ ಅಕ್ರಮ ಚಟುವಟಿಕೆಗಳು, ಮದ್ಯ ವಿತರಣೆ ಕಂಡುಬಂದಲ್ಲಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತೆರೆಯಲಾದ ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿ (ಕಂಟ್ರೋಲ್‌ ರೂಮ್‌) ಸಂಖ್ಯೆಗಳಿಗೆ ಮಾಹಿತಿ ನೀಡಬೇಕು ಎಂದು ಅಬಕಾರಿ ಇಲಾಖೆಯ ಉಪ
ಆಯುಕ್ತ ಬಿ.ಶಿವಪ್ರಸಾದ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next