Advertisement
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಜಯನಗರದಲ್ಲಿರುವ ಐಎಂಎ ಜ್ಯುವೆಲ್ಲರ್ಸ್‌ನ ಕಚೇರಿ ಹಾಗೂ ಶಿವಾಜಿನಗರದಲ್ಲಿರುವ ಆತನ ಮೂರನೇ ಪತ್ನಿಯ ಮನೆ ಮೇಲೆ ದಾಳಿ ನಡೆಸಿ, 33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
Related Articles
Advertisement
ರೆಡ್‌ಕಾರ್ನರ್ ನೋಟಿಸ್ ಜಾರಿ: ಮನ್ಸೂರ್ ಖಾನ್ ಪತ್ತೆಗೆ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡುವ ಕುರಿತು ಎಸ್‌ಐಟಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರಬರೆಯಲಾಗಿದೆ. ಆರೋಪಿ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಲು ಮನವಿ ಮಾಡಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಹೇಳಿದರು. ಆರೋಪಿಯ ಪತ್ತೆಗೆ ಮೊದಲ ಆದ್ಯತೆ ನೀಡಿದ್ದು, ತನಿಖೆಗೆ ಕಾಲಮಿತಿ ನಿಗದಿ ಪಡಿಸಿಕೊಂಡಿಲ್ಲ. ಆದರೆ, ವೇಗವಾಗಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ನೋಂದಣಿ ವಿಭಾಗದ ನಿರ್ಲಕ್ಷ್ಯ: ಮನ್ಸೂರ್ ಖಾನ್‌ನ ಐಎಂಎ ಸಮೂಹ ಸಂಸ್ಥೆಯ ಪೂರ್ವಾಪರ ಪರಿಶೀಲನೆ ನಡೆಸದೆ ಪರವಾನಗಿ ನೀಡಿದ ಸಹಕಾರ ಇಲಾಖೆಯ ನೋಂದಣಿ ವಿಭಾಗ ಮತ್ತು ಕಂಪನಿಗಳ ನೋಂದಣಿ ವಿಭಾಗ ನಿರ್ಲಕ್ಷ್ಯ ವಹಿಸಿರುವುದು ಎಸ್‌ಐಟಿ ತನಿಖೆ ವೇಳೆ ತಿಳಿದು ಬಂದಿದೆ. ನಿಯಮದ ಪ್ರಕಾರ ಪರವಾನಗಿ ನೀಡಿದ ಇಲಾಖೆಗೆ ಪ್ರತಿ ವರ್ಷ ನೋಂದಾಯಿತ ಸಂಸ್ಥೆ ತನ್ನ ಆರ್ಥಿಕ ವ್ಯವಹಾರದ ಲೆಕ್ಕಪತ್ರ ಸಲ್ಲಿಸಬೇಕು.
ಆದರೆ, ಐಎಂಎ ಇದುವರೆಗೂ ಲೆಕ್ಕಪತ್ರವೇ ಸಲ್ಲಿಸಿಲ್ಲ. ಆದರೂ ಅದರ ಪರವಾನಗಿ ನವೀಕರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ನೋಂದಣಿ ಇಲಾಖೆ ಅಧಿಕಾರಿಗಳು ಆರೋಪಿತ ಕಂಪನಿಯ ವಹಿವಾಟಿನ ಮೇಲೆ ನಿಗಾವಹಿಸಿದ್ದರೆ, ಸಾವಿರಾರು ಕೋಟಿ ರೂ. ವಂಚನೆ ತಡೆಯಬಹುದಿತ್ತು. ಆದರೆ, ಸಂಬಂಧಿಸಿದ ಇಲಾಖೆಗಳು ಮಾಡಿಲ್ಲ. ಸಂಸ್ಥೆ ಪರವಾನಗಿ ನವೀಕರಣಕ್ಕೆ ಸಲ್ಲಿಸುವಾಗ ಹೂಡಿಕೆಯಾದ ಹಣ, ಲಾಭಾಂಶ ಹಂಚಿಕೆ, ಅದರ ಮೂಲ ಎಲ್ಲವನ್ನೂ ಬಹಿರಂಗಪಡಿಸಬೇಕು.
ಅದರ ಮೇಲೆ ಸಂಬಂಧಿಸಿದ ತನಿಖಾ ಸಂಸ್ಥೆಗಳು ನಿಗಾವಹಿಸಬೇಕು. ತಮ್ಮಲ್ಲಿರುವ ಗುಪ್ತಚರ ವಿಭಾಗದಿಂದ ಮಾಹಿತಿ ಪಡೆದು, ಲೋಪದೋಷಗಳು ಕಂಡು ಬಂದರೆ, ಸಂಸ್ಥೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಬೇಕು. ಸಂಬಂಧಿಸಿದ ಇತರೆ ಇಲಾಖೆಗಳಿಗೂ ಮಾಹಿತಿ ನೀಡಿ ಕಾನೂನು ಕ್ರಮಕೈಗೊಳ್ಳಬೇಕು. ಆದರೆ, ಐಎಂಎ ಸಂಸ್ಥೆಯ ವಿರುದ್ಧ ಈ ರೀತಿಯ ಯಾವುದೇ ಕ್ರಮ ಪರಿಣಾಮಕಾರಿಯಾಗಿ ನಡೆದಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಮಾಹಿತಿ ಪಡೆದ ಜಾರಿ ನಿರ್ದೇಶನಾಲಯ: ಒಂದೆಡೆ ವಂಚನೆ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದರೆ, ಮತ್ತೂಂದೆಡೆ ಜಾರಿ ನಿರ್ದೇಶನಾಲಯ ಆರೋಪಿಯ ಹಣದ ವಹಿವಾಟಿನ ಬಗ್ಗೆ ಕಮರ್ಷಿಯಲ್ ಠಾಣೆ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದೆ. ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಾಯದ ಸಿಬ್ಬಂದಿಯೊಬ್ಬರು ಠಾಣೆ ಬಂದು, ಆರೋಪಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಫೇಮಾ ಹಾಗೂ ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಕಂಪನಿಯ ನಿರ್ದೇಶಕರು ಹಾಗೂ ಮನ್ಸೂರ್ ಖಾನ್‌ಗೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ. ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ)ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.
ಮನ್ಸೂರ್ ಖಾನ್ ವಿರುದ್ಧ ಮತ್ತೂಂದು ದೂರು: ಮನ್ಸೂರ್ ಖಾನ್ 9.84 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡಿ ವಂಚಿಸಿದ್ದಾನೆ ಎಂದು ಆರೋಪಿಸಿ ಚಿನ್ನಾಭರಣ ವ್ಯಾಪಾರಿ ಅಂಕಿತ್ ಎಂಬುವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಮನ್ಸೂರ್ ತಮ್ಮಿಂದ 9 ಕೋಟಿ 84 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದರು.
ಈ ಚಿನ್ನ ಖರೀದಿಸಿದ ಮೊತ್ತದ 9 ಕೋಟಿ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಇದೀಗ ಆ ಚೆಕ್ ಬೌನ್ಸ್ ಆಗಿದೆ ಎಂದು ಅಂಕಿತ್ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೂಂದೆಡೆ ವಂಚನೆಗೊಳಗಾದ ಸಾರ್ವಜನಿಕರು ಮಂಗಳವಾರವೂ ಶಿವಾಜಿನಗರದ ಗಣೇಶ್‌ಭಾಗ್ ಕನ್ವೆನÒನ್ ಹಾಲ್‌ನಲ್ಲಿ ದೂರು ನೀಡಿದ್ದು, ರಾತ್ರಿ ವೇಳೆಗೆ 42 ಸಾವಿರ ದೂರುಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.