Advertisement
ಮೊದಲೆರಡು ಪಂದ್ಯಗಳ ಲಯದಲ್ಲೇ ಸಾಗಿ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಳ್ಳುವುದು ಕೊಹ್ಲಿ ಪಡೆಯ ಯೋಜನೆ. ಆಗ “ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ.
ಈ ಸರಣಿಯಲ್ಲಿ ಭಾರತ ಎಲ್ಲ ವಿಭಾಗಗಳಲ್ಲೂ ತನ್ನ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಓಪನಿಂಗ್‌ನಲ್ಲಿ ಮಾಯಾಂಕ್ ಅಗರ್ವಾಲ್- ರೋಹಿತ್ ರನ್ ಪ್ರವಾಹ ಹರಿಸಿದ್ದಾರೆ. ಪೂಜಾರ, ಕೊಹ್ಲಿ ಬ್ಯಾಟಿನಿಂದಲೂ ಧಾರಾಳ ರನ್ ಬಂದಿದೆ. ರಹಾನೆ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬುತ್ತಿದ್ದಾರೆ. ಜಡೇಜ ಅವರದು ಜಬರ್ದಸ್ತ್ ಆಲ್‌ರೌಂಡ್ ಶೋ. ಸಾಹಾ ಕೀಪಿಂಗ್ ಅಸಾಧಾರಣ ಮಟ್ಟದಲ್ಲಿದೆ. ಅಶ್ವಿನ್ ಸ್ಪಿನ್ ಅಮೋಘ. ಪೇಸ್ ಬೌಲಿಂಗ್ ಯೂನಿಟ್ ಕೂಡ ಅಪಾಯಕಾರಿಯಾಗಿ ಗೋಚರಿಸಿದೆ. ಪುಣೆಯಲ್ಲಿ ಹನುಮ ವಿಹಾರಿಯನ್ನು ಹೊರಗಿರಿಸಿದ್ದರಿಂದ ನಷ್ಟವೇನೂ ಸಂಭವಿಸಿಲ್ಲ.
ರಾಂಚಿ ಪಿಚ್ ಸ್ಪಿನ್ನಿಗೆ ನೆರವಾಗುವ ಸಾಧ್ಯತೆ ಇದೆ. ಆದರೆ ಕುಲದೀಪ್ ಯಾದವ್ ಗಾಯಾಳಾಗಿದ್ದು, ಹನುಮ ವಿಹಾರಿ ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಲೂಬಹುದು.
Related Articles
ಇತ್ತ ಆಫ್ರಿಕಾ ಕ್ರಿಕೆಟಿಗರಿಗೆ ಭಾರತದ ಟ್ರ್ಯಾಕ್‌ಗಳು ಬಿಡಿಸಲಾಗದ ಒಗಟಿನಂ ತಾಗಿವೆ. ಇಲ್ಲಿ ಹೋರಾಟ ನಡೆಸುವುದಿರಲಿ, ನಿಂತು ಆಡುವುದೇ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ಗಳಿಂದ ರನ್ನೇ ಬರುತ್ತಿಲ್ಲ. ತಂಡ ಹೀನಾಯ ಕುಸಿತಕ್ಕೆ ಸಿಲುಕಿದಾಗಲೆಲ್ಲ ಬೌಲರ್‌ಗಳೇ ಬ್ಯಾಟ್ ಬೀಸಿ ಮರ್ಯಾದೆ ಕಾಪಾಡಬೇಕಾದುದು ಸದ್ಯದ ಸ್ಥಿತಿ.
Advertisement
ಪ್ರವಾಸಿಗರ ಬೌಲಿಂಗ್ ವಿಭಾಗವಂತೂ ಲೆಕ್ಕದ ಭರ್ತಿಗೆಂಬಂತಿದೆ. ಈ ಸರಣಿಯಲ್ಲಿ ಅದು ಭಾರತವನ್ನು ಒಮ್ಮೆಯೂ ಆಲೌಟ್ ಮಾಡಿಲ್ಲ. 2 ಟೆಸ್ಟ್ ಗಳಲ್ಲಿ ಉರುಳಿಸಲು ಸಾಧ್ಯವಾದದ್ದು 16 ವಿಕೆಟ್ ಮಾತ್ರ! ಆದರೆ ಭಾರತದ ಬೌಲರ್‌ಗಳು ಎಲ್ಲ 40 ವಿಕೆಟ್ ಉಡಾಯಿಸಿ ಮೆರೆದಿದ್ದಾರೆ. ಇತ್ತಂಡಗಳ ನಡುವಿನ ವ್ಯತ್ಯಾಸಕ್ಕೆ ಈ ಒಂದುನಿದರ್ಶನ ಸಾಕು. ಸಾಲದ್ದಕ್ಕೆ ಆಫ್ರಿಕಾ ತಂಡದ ಗಾಯದ ಸಮಸ್ಯೆಯೂ ಬಿಗಡಾಯಿಸಿದೆ. ಆರಂಭಕಾರ ಐಡನ್ ಮಾರ್ಕ್ ರಮ್, ಸ್ಪಿನ್ನರ್ ಕೇಶವ್ ಮಹಾರಾಜ್ ರಾಂಚಿ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೆ ಇದರಿಂದ ನಷ್ಟವೇನೂ ಸಂಭವಿಸಲಿಕ್ಕಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಶತಕ ಬಾರಿಸಿ ಮೆರೆದಿದ್ದ ಮಾರ್ಕ್‌ರಮ್, ಪುಣೆ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಸೊನ್ನೆ ಸುತ್ತಿದ್ದರು. ಮಹಾರಾಜ್, ಹೆಸರಿಗೆ ಸ್ಪಿನ್ನರ್ ಆದರೂ ಮಿಂಚಿದ್ದು ಬ್ಯಾಟಿಂಗ್‌ನಲ್ಲಿ.ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಹಸವಾಗಲಿದೆ! ಧೋನಿ ಊರಿನಲ್ಲಿ 2ನೇ ಟೆಸ್ಟ್ ಪಂದ್ಯ
ಇದು ಧೋನಿ ಊರಾದ ರಾಂಚಿಯಲ್ಲಿ ನಡೆಯುತ್ತಿರುವ ಕೇವಲ 2ನೇ ಟೆಸ್ಟ್ ಪಂದ್ಯ. ಮೊದಲ ಟೆಸ್ಟ್ ನಡೆದದ್ದು 2017ರಲ್ಲಿ, ಪ್ರವಾಸಿ ಆಸ್ಟ್ರೇಲಿಯ ವಿರುದ್ಧ. ಆ ಟೆಸ್ಟ್ ವೇಳೆಯೂ ಧೋನಿ ತಂಡದಲ್ಲಿರಲಿಲ್ಲ. ದೊಡ್ಡ ಮೊತ್ತದ ಆ ಪಂದ್ಯ ಡ್ರಾಗೊಂಡಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 451 ರನ್ ಪೇರಿಸಿತು. ನಾಯಕ ಸ್ಟೀವನ್ ಸ್ಮಿತ್ (ಅಜೇಯ 178), ಮ್ಯಾಟ್ ರೆನ್‌ಶಾ (104) ಶತಕ ಬಾರಿಸಿ ಮೆರೆದರು. ಭಾರತದ ಜವಾಬು ಭರ್ಜರಿಯಾಗಿತ್ತು. ಪೂಜಾರ ದ್ವಿಶತಕ (202), ಸಾಹಾ ಶತಕ (117) ಹೊಡೆದರು. 9ಕ್ಕೆ 603 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ ಬ್ಯಾಟಿಂಗ್ ಕ್ಲಿಕ್ ಆಗಲಿಲ್ಲ. ಭರ್ತಿ 100 ಓವರ್ ಆಟವಾಡಿ 6 ವಿಕೆಟಿಗೆ 204 ರನ್ ಗಳಿಸಿತು. ಪಂದ್ಯ ಡ್ರಾಗೊಂಡಿತು.ಈ ಪಂದ್ಯದಲ್ಲಿ ಜಡೇಜ ಒಟ್ಟು 9 ವಿಕೆಟ್ ಉರುಳಿಸಿದರು (5 ಪ್ಲಸ್ 4). ಪೂಜಾರ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮೊದಲ ದಿನ ಧೋನಿ ಅತಿಥಿ?
ರಾಂಚಿ ಟೆಸ್ಟ್ ಪಂದ್ಯದ ಮೊದಲ ದಿನವೇ ತವರಿನ ಹೀರೋ ಮಹೇಂದ್ರ ಸಿಂಗ್ ಧೋನಿ ಸ್ಟೇಡಿಯಂಗೆ ಆಗಮಿಸಿ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮುಂಬಯಿಯಲ್ಲಿರುವ ಧೋನಿ ಶನಿವಾರ ಬೆಳಗ್ಗೆ ರಾಂಚಿ ತಲುಪಲಿದ್ದು, ಬಾಲ್ಯದ ಗೆಳೆಯ ಹಾಗೂ ಜಾರ್ಖಂಡ್ ತಂಡದ ಮಾಜಿ ನಾಯಕ ಮಿಹಿರ್ ದಿವಾಕರ್ ಜತೆಗೂಡಿ ಸ್ಟೇಡಿಯಂಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಇದು ರಾಂಚಿಯಲ್ಲಿ ನಡೆಯುವ ಕೇವಲ ಎರಡನೇ ಟೆಸ್ಟ್ ಪಂದ್ಯವಾಗಿದ್ದು, ತವರಿನ ಟೆಸ್ಟ್‌ನಲ್ಲಿ ಆಡುವ ಅದೃಷ್ಟ ಧೋನಿಗೆ ಇಲ್ಲವಾಗಿದೆ. ಭಾರತ
ರೋಹಿತ್ ಶರ್ಮ, ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ಇಶಾಂತ್ ಶರ್ಮ, ಮೊಹಮ್ಮದ್ ಶಮಿ/ಹನುಮ ವಿಹಾರಿ, ಉಮೇಶ್ ಯಾದವ್. ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್, ಜುಬೇರ್ ಹಮ್ಜ/ಥಿಯುನಿಸ್ ಡಿ ಬ್ರುಯಿನ್, ಫಾ ಡು ಪ್ಲೆಸಿಸ್ (ನಾಯಕ), ಟೆಂಬ ಬವುಮ, ಹೆನ್ರಿಚ್ ಕ್ಲಾಸೆನ್, ಕ್ವಿಂಟನ್ ಡಿ ಕಾಕ್, ವೆರ್ನನ್ ಫಿಲಾಂಡರ್, ಸೇನುರಣ್ ಮುತ್ತುಸ್ವಾಮಿ, ಕಾಗಿಸೊ ರಬಾಡ, ಡೇನ್ ಪೀಟ್/ಜಾರ್ಜ್ ಲಿಂಡೆ, ಲುಂಗಿ ಎನ್‌ಗಿಡಿ.