ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಮಂಗಳವಾರ ನಡೆದ ಮೂರನೇ ಮತ್ತು ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ದ್ವಿತೀಯ ದರ್ಜೆಯ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.27.1 ಓವರ್ ಗಳಲ್ಲಿ ಅಗ್ಗದ 99 ರನ್ ಗಳಿಗೆ ಎಲ್ಲಾ ವಿಕೆಟ್ ಗಳನ್ನೂ ಕಬಳಿಸಿತು. ಕುಲದೀಪ್ ಯಾದವ್ ಬಿಗಿ ದಾಳಿ ನಡೆಸಿ 4.1 ಓವರ್ ಗಳಲ್ಲಿ 1 ಮೇಡನ್ ಸಹಿತ 4 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್, ಸಿರಾಜ್, ಶಾಬಾಜ್ ಅಹ್ಮದ್ ತಲಾ 2 ವಿಕೆಟ್ ಕಿತ್ತು ಗಮನ ಸೆಳೆದರು. ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ ಗರಿಷ್ಠ 34 ರನ್ ಗಳಿಸಿದರು. ಜನ್ನೆಮಾನ್ ಮಾಲನ್ 15, ಮಾರ್ಕೊ ಜಾನ್ಸೆನ್ 14 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ.
100 ರನ್ ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 19.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ ಜಯ ದಾಖಲಿಸಿತು. ನಾಯಕ ಶಿಖರ್ ಧವನ್ 8 ರನ್ ಗಳಿಗೆ ಔಟಾಗುವ ಮೂಲಕ ವೈಫಲ್ಯ ಅನುಭವಿಸಿದರು. ಶುಬ್ಮನ್ ಗಿಲ್ 49 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 10 ರನ್ ಗಳಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಅಜೇಯ 28 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 2 ಗಳಿಸಿದರು.
ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಆಟಗಾರನಾದರೆ, ಮೊಹಮ್ಮದ್ ಸಿರಾಜ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಕಳೆದ ಕೆಲವು ದಿನಗಳಿಂದ ದೆಹಲಿಯ ಭಾರೀ ಮಳೆಯ ನಂತರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ ಒದ್ದೆಯಾದ ಮೈದಾನದಿಂದಾಗಿ ಟಾಸ್ ವಿಳಂಬವಾಗಿತ್ತು.