– ಸಂತ್ರಸ್ತರ ಮಕ್ಕಳ ಮೊಗದಲ್ಲಿ ನಗು
ಬಾಗಲಕೋಟೆ : ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದ್ದ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮದಲ್ಲಿ 3rd ಕ್ಲಾಸ್ ಚಿತ್ರ ತಂಡದ ನಾಯಕ-ನಾಯಕಿ ಹಾಗೂ ಸಹ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರ ತಂಡದವರು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದರು.
7 ಹಿಲ್ಸ್ ಸ್ಟುಡಿಯೋ ನಿರ್ಮಾಣದ 3rd ಕ್ಲಾಸ್ ಸಿನೆಮಾ ನಾಯಕ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್, ತಂಡದ ಕಿರಣ, ಮಣಿ ಮುಂತಾದವರು ರವಿವಾರ ರಾತ್ರಿ ಗ್ರಾಮಕ್ಕೆ ತೆರಳಿದವರು. ಚಿತ್ರ ತಂಡದವರನ್ನು ಇಡೀ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ನೃತ್ಯ, ಹಾಡು ಹಾಡಿ ರಂಜಿಸಿದರು. ಗ್ರಾಮದ ಸಂತ್ರಸ್ತರ ಮಕ್ಕಳಿಂದಲೇ ವಿವಿಧ ಹಾಡು, ನೃತ್ಯ ಮಾಡಿಸಿ, ನಟ-ನಟಿಯರೂ ನೃತ್ಯ ಮಾಡಿ, ಮಕ್ಕಳ ಮೊಗದಲ್ಲಿ ಹರ್ಷ ಮೂಡಿಸಿದರು.
Related Articles
ಬಳಿಕ ನಟ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್ ಅವರೇ ಸ್ವತಃ ಮಕ್ಕಳು, ಗ್ರಾಮಸ್ಥರು ಹಾಗೂ ಚಿತ್ರ ತಂಡದವರಿಗಾಗಿ ಅಡುಗೆ (ಪಲಾವ್, ಶಾವಿಗೆ ಪಾಯಸ) ಸಿದ್ಧಪಡಿಸಿದರು. ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯ ಕೊಠಡಿಯಲ್ಲೇ ವಾಸ್ತವ್ಯ ಮಾಡಿದರು.
ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ :
3rd ಕ್ಲಾಸ್ ಸಿನೆಮಾ ನಡೆ ಗ್ರಾಮದ ಕಡೆ ಎಂಬ ಪರಿಕಲ್ಪನೆಯೊಂದಿಗೆ ನಟ-ನಿರ್ಮಾಪಕರೂ ಆಗಿರುವ ನಮ್ಮ ಜಗದೀಶ, ನಟಿ ರೂಪಿಕಾ ಹಾಗೂ ನಂದನ್ ಅವರು, ಚಿತ್ರ ತಂಡದ ಮೂಲಕ ಕರ್ಲಕೊಪ್ಪ ಗ್ರಾಮ ದತ್ತು ಪಡೆದಿದ್ದು, ಆರಂಭಿಕವಾಗಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮದ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಒಟ್ಟು 76 ಮಕ್ಕಳಿದ್ದು, ಆರು ಕೊಠಡಿಗಳಲ್ಲಿ ಎರಡು ಸಂಪೂರ್ಣ ಬಿದ್ದಿವೆ. ಆ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಚಿತ್ರತಂಡ ಸೋಮವಾರ ಚಾಲನೆ ನೀಡಿತು.
ಚಿತ್ರ ತಂಡದ ಪರವಾಗಿ ಕಾರ್ಗಿಲ ಯೋಧ ರಂಗಪ್ಪ ಆಲೂರ, ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ವಸತಿಯುತ ಅಂಧ ಮಕ್ಕಳ ಶಾಲೆಯ ಅಂಧ ಮಕ್ಕಳು ದೀಪ ಬೆಳಗುವ ಮೂಲಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಚಿತ್ರ ತಂಡಕ್ಕೆ ಶ್ಲಾಘನೆ :
ಪ್ರವಾಹ ಪೀಡಿತ ಗ್ರಾಮವನ್ನು ದತ್ತು ಪಡೆದು ಬಿದ್ದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ 3rd ಕ್ಲಾಸ್ ಸಿನೆಮಾ ತಂಡದ ಕಾರ್ಯಕ್ಕೆ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ, ಬರನಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ಹಲವು ಶ್ಲಾಘನೆ ವ್ಯಕ್ತಪಡಿಸಿದರು.