ಬೆಂಗಳೂರು: ಕೋವಿಡ್ 19 ಸೋಂಕು ಪೀಡಿತರಿಗೆ ಚಿಕಿತ್ಸೆ ಜತೆಗೆ ಸೋಂಕು ತಡೆ ಮೂಲಕ ಸಮುದಾಯ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನ ನಿರ್ವಹಣ ನಿಧಿ (ಎಸ್‌ಡಿಆರ್‌ಎಫ್)ಯಡಿ ತನ್ನ ಪಾಲಿನ 11,067 ಕೋ.ರೂ. ಘೋಷಿಸಿದ್ದು, ರಾಜ್ಯಕ್ಕೆ 395.50 ಕೋ. ರೂ. ಬಿಡುಗಡೆಯಾಗಿದೆ.
ರಾಜ್ಯಕ್ಕೆ 2020-21ನೇ ಸಾಲಿಗೆ ಕೇಂದ್ರ ಸರಕಾರವು ಎಸ್‌ಡಿಆರ್‌ಎಫ್ ಅಡಿ 1,054 ಕೋ. ರೂ. ಕಾಯ್ದಿರಿಸಿದ್ದು, ಅದರಡಿ ಮೊದಲ ಕಂತಿನಲ್ಲಿ 395 ಕೋ. ರೂ. ಬಿಡುಗಡೆ ಮಾಡಿದೆ. ಹಾಗಾಗಿ ಎಸ್‌ಡಿಆರ್‌ಎಫ್‌ನಡಿ ಬಾಕಿ ಉಳಿಯುವ 659 ಕೋ.ರೂ. ಮಾತ್ರ ವರ್ಷಪೂರ್ತಿ ಎದುರಾಗಬಹುದಾದ ವಿಪತ್ತುಗಳ ನಿರ್ವಹಣೆಗೆ ಸಿಗುವ ಆಪದ್ಧನವಾಗಿದೆ.ರಾಜ್ಯ ಸರಕಾರ ಎಸ್‌ಡಿಆರ್‌ಎಫ್‌ನಡಿ 80 ಕೋ. ರೂ. ಹಣವನ್ನು ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬಳಸುವುದಾಗಿ ಈ ಹಿಂದೆ ಪ್ರಕಟಿಸಿತ್ತು.
ಕೇಂದ್ರದಿಂದ ಎಸ್‌ಡಿಆರ್‌ಎಫ್ ನಿಧಿಯಡಿ 395 ಕೋ.ರೂ. ಬಿಡುಗಡೆಯಾಗಿದೆ. ಪ್ರತಿ ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ತಡೆ, ನಿಯಂತ್ರಣ ಸ್ಥಿತಿಗತಿ ಆಧಾರದ ಮೇಲೆ ಕೇಂದ್ರ ಹಣ ನೀಡಿದಂತಿದೆ. ಸದ್ಯದಲ್ಲೇ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆ ನಡೆಸಿ ಹಣ ಬಳಕೆಗೆ ಕಾರ್ಯ ಯೋಜನೆ ರೂಪಿಸಿ ಸೋಂಕು ತಡೆಗೆ ಸರಕಾರ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದೆ.
-ಆರ್.ಅಶೋಕ್, ಕಂದಾಯ ಸಚಿವ