ಬೆಂಗಳೂರು: ಅತಿಹೆಚ್ಚು ಕೋವಿಡ್ 19 ಸೋಂಕು ಪ್ರಕರಣಗಳಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ 39 ಸ್ಥಳಗಳನ್ನು ಹಾಟ್‌ಸ್ಪಾಟ್‌ಗಳು ಎಂದು ಗುರುತಿಸಿದ್ದು, ಅವೆಲ್ಲವೂ ಈಗ “ರೆಡ್‌ಝೋನ್’ನಲ್ಲಿ ಬರಲಿವೆ.
ಸೋಂಕಿತ ಪ್ರಕರಣಗಳು ಮತ್ತು ಆ ಸೋಂಕಿತರೊಂದಿಗಿನ ಪ್ರಾಥಮಿಕ ಸಂಪರ್ಕ ಹೊಂದಿರುವವರು ಹಾಗೂ ಕ್ವಾರಂಟೈನ್ ಆಧರಿಸಿ ಪ್ರದೇಶಗಳನ್ನು ವಿಂಗಡಣೆ ಮಾಡಲಾಗಿದ್ದು, ಅದರಲ್ಲಿ 36 ವಾರ್ಡ್‌ಗಳ 39 ಸ್ಥಳಗಳು ರೆಡ್‌ಝೋನ್‌ನಲ್ಲಿ ಬರುತ್ತವೆ. ಅದೇ ವಾರ್ಡ್‌ಗಳಲ್ಲಿ ಪ್ರಾಥಮಿಕ ಸಂಪರ್ಕದಲ್ಲಿರುವ ಪ್ರಕರಣಗಳನ್ನು ಆಧರಿಸಿ ಹಳದಿ ಎಂದು ಗುರುತಿಸಲಾಗಿದೆ. ಆರೋಗ್ಯ ಇಲಾಖೆ ಪ್ರಕಾರ ಇಡೀ ರಾಜ್ಯದಲ್ಲಿ ರೆಡ್‌ಝೋನ್ ಪ್ರದೇಶಗಳು ಬೆಂಗಳೂರು ಸೇರಿ ಅಂದಾಜು ಹತ್ತು.
ಹಾಟ್‌ಸ್ಪಾಟ್ ಎಂದರೆ ಏನು?: ಕೊರೊನಾ ಸೋಂಕು ಪ್ರಕರಣ ದಾಖಲಾದ ಪ್ರದೇಶಗಳನ್ನು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳ ಆಧಾರದ ಮೇಲೆ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ 28ದಿನಗಳಲ್ಲಿ ಯಾರಿಗಾದರೂ ಕೋವಿಡ್ 19 ಸೋಂಕು ದೃಢಪಟ್ಟಿದ್ದರೆ ಹಾಗೂ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ 50 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ, ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಆಧಾರದ ಮೇಲೆ ಸದ್ಯ ನಗರದ 39 ಪ್ರದೇಶಗಳ ಪಟ್ಟಿಮಾಡಲಾಗಿದೆ. ಇಲ್ಲಿ ಉಳಿದ ಪ್ರದೇಶಗಳಿಗಿಂತ ತುಸು ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೀಲ್‌ಡೌನ್ ಪ್ರದೇಶಗಳು: ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಪುಜಿನಗರ(ವಾರ್ಡ್ ನಂ.134) ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದರಾಯನಪುರ (ವಾರ್ಡ್ ನಂ.135) ವಾರ್ಡ್‌ಗಳನ್ನು ಸದ್ಯ ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. ಈ ಎರಡು ವಾರ್ಡ್‌ಗಳಲ್ಲಿ ಯಾರೂ ಅನವಶ್ಯಕವಾಗಿ ಹೊರಗೆ ಬರದಂತೆ ಹಾಗೂ ಹೊರಗಿನಿಂದಲೂ ಯಾರೂ ಒಳಗೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯಕ್ಕೆ ನಗರದ ಬೇರೆ ಯಾವುದೇ ಪ್ರದೇಶವನ್ನು ಸೀಲ್‌ಡೌನ್ ಮಾಡುವ ಪ್ರಸ್ತಾವನೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ.
ಈ ವಾರ್ಡ್‌ಗಳಲ್ಲಿ ಕೋವಿಡ್ 19 ಕಡಿಮೆ ಅವಧಿಯಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿತ್ತು. ಈ ರೀತಿ ಬೇರೆ ಯಾವುದೇ ಭಾಗದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಟಿಪ್ಪುನಗರದಲ್ಲಿ 75 ಪ್ರಾಥಮಿಕ ಸಂಪರ್ಕಿತರು : ಇನ್ನು ಕೋವಿಡ್ 19 ಸೋಂಕಿನಿಂದ ಸೋಮವಾರ ಮೃತಪಟ್ಟಿರುವ ವೃದ್ಧ ಚಾಮರಾಜಪೇಟೆಯ ಟಿಪ್ಪುನಗರ ನಿವಾಸಿಯಾಗಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 75 ಮಂದಿಯನ್ನು ಹೋಟೆಲ್ ಕ್ವಾರೆಂಟೈನ್ ಮಾಡಲಾಗಿದೆ. ಉಳಿದಂತೆ ಪರೋಕ್ಷ ಸಂಪರ್ಕಿತ ವ್ಯಕ್ತಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಈಗಾಗಲೇ ಆರೋಗ್ಯ ತಪಾಸಣೆ ಶುರುಮಾಡಲಾಗಿದ್ದು, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಸೋಂಕಿತ ಮೃತ ವ್ಯಕ್ತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕೇಂದ್ರ ಸರ್ಕಾರದ ಕೋವಿಡ್-19ರ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.