Advertisement

ನಾಳೆ ಗುಲ್ಬರ್ಗ ವಿವಿ 38ನೇ ಘಟಿಕೋತ್ಸವ

03:08 PM Nov 20, 2020 | Suhan S |

ಕಲಬುರಗಿ: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ 38ನೇ ವಾರ್ಷಿಕ ಘಟಿಕೋತ್ಸವ ವಿವಿಯ ಜ್ಞಾನಗಂಗಾ ಆವರಣದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ ಭವನದಲ್ಲಿ ನ. 20ರಂದು ಬೆಳಗ್ಗೆ 11ಕ್ಕೆ ಸಾಮಾಜಿಕ ಅಂತರದೊಂದಿಗೆ ಹಮ್ಮಿಕೊಳ್ಳಲಾಗಿದೆ.

Advertisement

ಘಟಿಕೋತ್ಸವದಲ್ಲಿ ಪದವಿ ಪಡೆಯಲಿರುವ ಕೆಲ ವಿದ್ಯಾರ್ಥಿಗಳು, ವಿವಿ ಅಧಿ ಕಾರಿಗಳು, ವಿವಿಧ ನಿಕಾಯದ ಡೀನ್‌ಗಳು, ಮುಖ್ಯಸ್ಥರು ಸಿಂಡಿಕೇಟ್‌ ಸದಸ್ಯರು, ಪ್ರಾಧ್ಯಾಪಕರು ಸೇರಿ 250 ಜನರು ಪಾಲ್ಗೊಳ್ಳಲು ಅವಕಾಶವಿದೆ. ಕೋವಿಡ್‌-19 ಸುರಕ್ಷತಾ ಕ್ರಮಗಳೊಂದಿಗೆ ಸಮಾರಂಭ ನೆರವೇರಿಸಲಾಗುತ್ತಿದೆ ಎಂದು ವಿವಿ ಪ್ರಭಾರಿ ಕುಲಪತಿ ಪ್ರೊ| ಚಂದ್ರಕಾಂತ ಯಾತನೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಮಾತ್ರ ಈ ಸಲ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಿಸಿದರು. ಘಟಿಕೋತ್ಸವದಲ್ಲಿ ಒಟ್ಟಾರೆ 157 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುವುದು. ಅದೇ ರೀತಿ 175 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದೆ ಎಂದರು.

ಎಲ್ಲರೂ ಗೈರು: ರಾಜ್ಯಪಾಲರಾದ ವಜುಭಾಯಿ ರೂಡಾಭಾಯ್‌ ವಾಲಾ ಘಟಿಕೋತ್ಸವದ ಅಧ್ಯಕ್ಷತೆ ವಹಿಸಬೇಕಿತ್ತು. ಅದೇ ರೀತಿ ವಿವಿ ಸಮಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ್ ನಾರಾಯಣಜತೆಗೆ ಘಟಿಕೋತ್ಸವ ಭಾಷಣ ಮಾಡಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ| ಎಸ್‌. ಮಾದೇಶ್ವರನ್‌ ಎಲ್ಲರೂ ಘಟಿಕೋತ್ಸವದಲ್ಲಿ ಪಾಲ್ಗೊಳ್ಳದೇ ಗೈರುಹಾಜರಾಗುತ್ತಿದ್ದಾರೆ. ಪ್ರೊ| ಎಸ್‌. ಮಾದೇಶ್ವರನ್‌ ಆನ್‌ಲೈನ್‌ ಮುಖಾಂತರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಇನ್ನು ಮಂತ್ರಾಲಯ ಶ್ರೀಗಳು ನ.20ರಿಂದ ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ್‌ ಸಮಾರಂಭ ನಡೆಯುತ್ತಿರುವುದರಿಂದ ಗೌರವ ಡಾಕ್ಟರೇಟ್‌ ಸ್ವೀಕರಿಸಲು ಬರಲಿಕ್ಕಾಗುವುದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಪುಷ್ಕರ ಸಮಾರಂಭಕ್ಕೆ ಒಂದು ದಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬರಲಿದ್ದು, ಆ ದಿನದಂದು ಗೌರವ ಡಾಕ್ಟರೇಟ್‌ ಪ್ರದಾನ ಮಾಡಬಹುದೆಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕುಲಪತಿಗಳು ತಿಳಿಸಿದರು.

Advertisement

ವಿವಿಗಳಿಗೆ ಪತ್ರ: ಬಿಎ, ಬಿಎಸ್ಸಿ ಸೇರಿ ಇತರ ಪದವಿಗಳ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸದ ಕಾರಣ ಗುಲ್ಬರ್ಗ ವಿವಿ ವಿದ್ಯಾರ್ಥಿಗಳು ರಾಜ್ಯದ ಇತರ ವಿವಿಗಳಲ್ಲಿ ಪ್ರವೇಶಾತಿ ಪಡೆಯದಂತಾಗಿದೆ. ಬೇರೆ ವಿವಿಗಳ ಪ್ರವೇಶಾತಿ ಮುಕ್ತಾಯಕ್ಕೆ ಬಂದಿದ್ದರಿಂದ ಮುಂದಿನ ದಿನಗಳಲ್ಲಿ ತಮ್ಮ ವಿವಿಗಳಲ್ಲಿ ಗುಲ್ಬರ್ಗ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಮಾಡಿ ಕೊಡುವಂತೆ ಪತ್ರ ಬರೆಯಲಾಗುವುದು ಎಂದು ಕುಲಪತಿ ಪ್ರೊ| ಯಾತನೂರ ತಿಳಿಸಿದರು.

ಕೊವಿಡ್‌-19 ಹಿನ್ನೆಲೆಯಲ್ಲಿ ಉಪನ್ಯಾಕರು ಮೌಲ್ಯಮಾಪನಕ್ಕೆ ಬಾರದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಲು ಸಾಕಷ್ಟು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಕುಲಸಚಿವರಾದ ಪ್ರೊ| ಸಿ. ಸೋಮಶೇಖರ, ಪ್ರೊ| ಸಂಜೀವಕುಮಾರ (ಮೌಲ್ಯಮಾಪನ) ಇದ್ದರು.

ಗೌರವ ಡಾಕ್ಟರೇಟ್‌ಗೆ 20 ಅರ್ಜಿ :  ಈ ಸಲ ಗೌರವ ಡಾಕ್ಟರೇಟ್‌ಗೆ 20 ಅರ್ಜಿ ಸಲ್ಲಿಕೆಯಾಗಿದ್ದವು. ಅವುಗಳನ್ನು ವಿದ್ಯಾ ವಿಷಯಕ್‌ ಪರಿಷತ್‌ದಲ್ಲಿ ಚರ್ಚಿಸಿ ಸಿಂಡಿಕೇಟ್‌ ಗೆ ಕಳುಹಿಸಲಾಯಿತು. ಅವುಗಳನ್ನೆಲ್ಲ ಪರಿಶೀಲಿಸಿ ಸತ್ಯಶೋಧನಾ ಸಮಿತಿಗೆ ವಹಿಸಲಾಗಿ, ಮೂವರು ಕುಲಪತಿಗಳ ನೇತೃತ್ವದಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಮಂತ್ರಾಲಯ ಶ್ರೀಗಳ ಒಬ್ಬರನ್ನು ಅಂತಿಮಗೊಳಿಸಲಾಗಿದೆ ಎಂದು ಕುಲಪತಿಗಳು ವಿವರಣೆ ನೀಡಿದರು.

ಪದವಿ ಅಂತಿಮ ವರ್ಷದ ಫ‌ಲಿತಾಂಶ ನೀಡುವಲ್ಲಿ ವಿಳಂಬವಾಗಿದೆ. ಉಪನ್ಯಾಸಕರಿಗೆ ಮನವಿ ಮಾಡಿಕೊಂಡು ಮೌಲ್ಯಮಾಪನ ನಡೆಸಲಾಗುತ್ತಿದೆ. ಕೋವಿಡ್ ಹಿನ್ನೆಲೆ ಹಾಗೂ ಅತಿ ಹೆಚ್ಚಿನ ವಿದ್ಯಾರ್ಥಿಗಳಿರುವುದರಿಂದ ಫ‌ಲಿತಾಂಶ ನೀಡಲು ತೊಂದರೆಯಾಗಿದೆ. ವಾರದೊಳಗೆ ಫ‌ಲಿತಾಂಶ ಪ್ರಕಟಕ್ಕೆ ಕ್ರಮ ಕೈಗೊಳ್ಳಲಾಗುವುದು.-ಪ್ರೊ. ಚಂದ್ರಕಾಂತ ಯಾತನೂರ, ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next