ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 384 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು 4,122ಕ್ಕೆ ಏರಿಕೆಯಾದಂತಾಗಿದೆ. ಶನಿವಾರದಂದು ಮೂರು ಮಂದಿ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ್ದು, 89 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.
ದೆಹಲಿಯಲ್ಲಿ ಈವರೆಗೆ 1,256 ಜನರು ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಟ್ಟು 64 ಜನರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
5.37 ಲಕ್ಷ ಜನಸಂಖ್ಯೆ ಹೊಂದಿರುವ ದೆಹಲಿಯಲ್ಲಿ 96 ಸೋಂಕಿತ ವಲಯಗಳನ್ನು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಈ ವಲಯಗಳಲ್ಲಿ 1,015 ಪ್ರಕರಣ ಪತ್ತೆಯಾದ ನಂತರ ಸೀಲ್ಡ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಏಪ್ರಿಲ್ 18ರಂದು ವ್ಯಕ್ತಿಯೊಬ್ಬನಿಗೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದ ನಂತರ ದೆಹಲಿ-ಹರ್ಯಾಣ ಗಡಿಯನ್ನು ಬಂದ್ ಮಾಡಲಾಗಿತ್ತು. ಏಪ್ರಿಲ್ 20-21ರಂದು 175 ಜನರ ಸ್ಯಾಂಪಲ್ಸ್ ಅನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.
ಶನಿವಾರ 67 ಜನರ ವರದಿ ಬಂದಿದ್ದು, ಇದರಲ್ಲಿ 41 ಮಂದಿಗೆ ಕೋವಿಡ್ 19 ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಕೋವಿಡ್ 19 ದೆಹಲಿ ತತ್ತರಿಸಿ ಹೋಗಿದ್ದು, ರಾಜಧಾನಿಯ ಎಲ್ಲಾ 11 ಜಿಲ್ಲೆಗಳನ್ನು ರೆಡ್ ಝೋನ್ ಎಂದು ವಿಭಾಗಿಸಲಾಗಿದೆ ಎಂದು ವರದಿ ತಿಳಿಸಿದೆ.