Advertisement

ಹಣದಾಸೆಗೆ 38 ದಿನದ ಮಗು ಮಾರಾಟ: ಸಾಮಾಜಿಕ ಕಾರ್ಯಕರ್ತೆ ಸೇರಿ ಮೂವರ ಬಂಧನ

09:19 AM Aug 19, 2021 | Team Udayavani |

ಬೆಂಗಳೂರು: ಹಣದಾಸೆಗೆ ಕೆಲಸದಾಕೆಯ 38 ದಿನಗಳ ಹಸುಗೂಸನ್ನು ಮಾರಾಟಕ್ಕೆ ಮುಂದಾಗಿದ್ದ ಮನೆ ಮಾಲಕಿ ಸೇರಿ ಮೂವರು ವಿಲ್ಸನ್‌ ಗಾರ್ಡ್‌ನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಆಡುಗೋಡಿ ನಿವಾಸಿ ತರುಣಮ್‌ ಬಾನು (38), ಆಕೆಯ ಸಂಬಂಧಿ ಹಾಗೂ ಮಗು ಮಾರಾಟಕ್ಕೆ ಸಹಕರಿಸಿದ್ದ ನಿಶಾತ್‌ ಕೌಶರ್‌ (45) ಹಾಗೂ ಅವರಿಂದ ಮಗು ಖರೀದಿಸಿದ್ದ ಸಂಬಂಧಿ ಎಚ್‌ ಬಿಆರ್‌ ಲೇಔಟ್‌ ನಿವಾಸಿ ಕೆ.ಸವೋದ್‌ (51) ಬಂಧಿತರು. ಆರೋಪಿಗಳಿಂದ 50 ಸಾವಿರ ರೂ. ನಗದು ಹಾಗೂ ಮಗುವನ್ನು ರಕ್ಷಣೆ ಮಾಡಿ ತಾಯಿಗೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಬಾರಕ್‌ ಪಾಷಾಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಸಾಮಾಜಿಕ ಕಾರ್ಯಕರ್ತೆಯಾಗಿರುವ ತರುಣಮ್‌ ಬಾನು ಮನೆಯಲ್ಲಿ ಶಿರೀನ್‌ ಎಂಬಾಕೆ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಆಟೋ ಚಾಲಕ ಮುಬಾರಕ್‌ ಪಾಷಾ ಜತೆ ಅಕ್ರಮ ಸಂಬಂಧ ಹೊಂದಿದ್ದು, ಗರ್ಭಿಣಿಯಾಗಿದ್ದ ಶಿರೀನ್‌ 38 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ತರುಣಮ್‌ ಬಾನು ಸಂಬಂಧಿ ನಿಶಾತ್‌ ಕೌಶರ್‌ಳ ಮೈದುನ ಸವೋದ್‌ ದಂಪತಿಗೆ 15 ವರ್ಷಗಳಿಂದ ಮಕ್ಕಳು ಇರಲಿಲ್ಲ. ಅದರಿಂದ ಬೇಸೆತ್ತಿದ್ದ ಸವೂದ್‌ ಮಗು ದತ್ತು ಪಡೆಯಲು ಮುಂದಾಗಿದ್ದ. ಅದೇ ವೇಳೆ ತರುಣಮ್‌ ಬಾನು, ತನ್ನ ಕೆಲಸದಾಕೆ ಶಿರೀನ್‌ಳ ವಿಚಾರ ತಿಳಿದುಕೊಂಡು ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಮುಬಾರಕ್‌ ಪಾಷಾಗೆ ಹಣದ ಆಮಿಷವೊಡ್ಡಿ ಮಗು ಮಾರಾಟಕ್ಕೆ ಪ್ರಚೋದನೆ ನೀಡಿದ್ದರು. ಅಲ್ಲದೆ, 1.30 ಲಕ್ಷ ರೂ.ಗೆ ಮಾರಾಟ ಮಾಡಿ, ಮುಂಗಡ 50 ಸಾವಿರ ರೂ. ಪಡೆದುಕೊಂಡಿದ್ದರು. ಹೀಗಾಗಿ ಆರೋಪಿ ಮುಬಾರಕ್‌ ಪಾಷಾ, ಆ.11ರಂದು ಶಿರೀನ್‌ ಬಳಿ ಹೋಗಿ ಮಗುವನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವುದಾಗಿ ಕೊಂಡೊಯ್ದು ತರುಣಮ್‌ ಬಾನುಗೆ ಕೊಟ್ಟಿದ್ದಾನೆ. ಆಕೆ ಸವೋದ್‌ಗೆ ಮಗು ಮಾರಾಟ ಮಾಡಿ ಹಣ ಪಡೆದುಕೊಂಡಿದ್ದರು.

ಮತ್ತೂಂದೆಡೆ ಮುಬಾರಕ್‌ ಪಾಷಾ ಮತ್ತು ಮನೆ ಮಾಲಕಿ ತರುಣಮ್‌ ಬಾನುಗೆ ಮಗುವನ್ನು ಪತ್ತೆ ಹಚ್ಚಿಕೊಂಡುವಂತೆ ದುಂಬಾಲು ಬಿದ್ದಿದ್ದರು. ಆದರೆ, ಆರೋಪಿಗಳು ತಮಗೆ ಏನೂ ತಿಳಿದಿಲ್ಲ. ಅಲ್ಲದೆ, ಮಗುವನ್ನು ಯಾರು ಕಳವು ಮಾಡಿದ್ದಾರೆ ಎಂದು ಮುಬಾರಕ್‌ ಪಾಷಾ ನಂಬಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

ನಡು ಬೀದಿಯಲ್ಲಿ ಗಲಾಟೆ, ಸಿಕ್ಕಿ ಬಿದ್ದಕಳ್ಳರು!: ಈ ಮಧ್ಯೆ ಸವೋದ್‌ನಿಂದ 50 ಸಾವಿರ ರೂ. ಪಡೆದಿದ್ದ ತರುಣಮ್‌ ಬಾನು, ಮುಬಾರಕ್‌ ಪಾಷಾಗೆ ಪಾಲಿನ ಹಣ ಕೊಟ್ಟಿರಲಿಲ್ಲ. ಹೀಗಾಗಿ ಆ.16ರಂದು ವಿಲ್ಸನ್‌ ಗಾರ್ಡನ್‌ನ ಆಸ್ಪತ್ರೆಯೊಂದರ ಬಳಿ ಹಣ ಕೊಡುವಂತೆ ಆಕೆ ಜತೆ ಜಗಳ ಮಾಡುತ್ತಿದ್ದ. ಇಬ್ಬರ ನಡುವಿನ ವಾಗ್ವಾದ, ಪರಸ್ಪರ ಹಲ್ಲೆ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮುಬಾರಕ್‌ ಪಾಷಾ ನಾಪತ್ತೆಯಾಗಿದ್ದಾನೆ. ಬಳಿಕ ತರುಣಮ್‌ ಬಾನುಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್‌ ಶಂಕರಾಚಾರ್‌ ನೇತೃತ್ವದ  ತಂಡ ಮಗು ಖರೀದಿಸಿದ್ದ ಸವೋದ್‌ನನ್ನು ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿ, ಆಕೆಯ ತಾಯಿ ಶರೀನ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು

ಮಗುವಿಗಾಗಿ ಬೇಡಿದ ತಾಯಿ ಶರೀನ್‌: ತಾಯಿ ಶರೀನ್‌ ನಿತ್ಯ ಮಗುವಿಗೆ ಎದೆ ಹಾಲುಣಿಸುತ್ತಿದ್ದರು. ಆದರೆ, ಮುಬಾರಕ್‌ ಪಾಷಾ ಮಗುವನ್ನು ಕೊಂಡೊಯ್ದಿದ್ದರಿಂದ ಆಕೆಯ ಎದೆಯಲ್ಲಿ ಹಾಲು ಶೇಖರಣೆಗೊಂಡು ಎದೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಎದೆ ಹಾಲುಣಿಸಬೇಕು. ದಯವಿಟ್ಟು ಮಗುವನ್ನು ಪತ್ತೆ ಹಚ್ಚಿಕೊಡಿ ಎಂದು ಮುಬಾರಕ್‌ ಪಾಷಾ ಮತ್ತು ತರುಣಮ್‌ ಬಾನುಗೆ ಬೇಡಿ ಕೊಂಡಿದ್ದರು. ಆದರೂಆರೋಪಿಗಳು ಕರಗದೆ ತಮಗೇನೂ ಗೊತ್ತಿಲ್ಲ ಎಂಬಂತೆ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next