Advertisement
ಇನ್ನೂ ಬಾರದ ಹಣ: ಕೆಸ್ತೂರು ಗ್ರಾಪಂ ವ್ಯಾಪ್ತಿಯ ಈ ಗ್ರಾಮಗಳ ಹಿಂದುಳಿದ ವರ್ಗಗಳ ತೀರಾ ಬಡ ಕುಟುಂಬಗಳನ್ನು ಬಸವ ವಸತಿ ಯೋಜನೆಯಡಿ ಗ್ರಾಪಂನಿಂದ ಆಯ್ಕೆ ಮಾಡಲಾಗಿತ್ತು. ಆದರೆ, ಆಯ್ಕೆ ಮಾಡಿ ಒಂದು ವರ್ಷವಾದರೂ ಇನ್ನೂ ಒಂದು ಕಂತಿನ ಹಣವೂ ಬಿಡುಗಡೆಯಾಗಿಲ್ಲ.
Related Articles
Advertisement
ನಮ್ಮ ಮನೆಯನ್ನು ಕೆಡವಿ ಸಾಲ ಮಾಡಿ ಅಡಿಪಾಯ ಹಾಕಿದ್ದೆವು, ಆದರೆ, ಪಂಚಾಯ್ತಿ ವತಿಯಿಂದ ಇನ್ನೂ ಒಂದೂ ಬಿಲ್ ಪಾವತಿಯಾಗಿಲ್ಲ. ಇದರ ಮುಂಭಾಗದಲ್ಲೇ ಚರಂಡಿ ಹಾದು ಹೋಗಿದೆ. ಅಡಿಪಾಯದ ಮೇಲ್ಭಾಗದಲ್ಲೇ ತೆಂಗಿನ ಗರಿಯ ಶೆಡ್ ಹಾಕಿ ವಾಸವಾಗಿದ್ದೇವೆ. ರಾತ್ರಿ ವೇಳೆ ಹಾವು, ಚೇಳು ಸೇರಿದಂತೆ ವಿಷಜಂತುಗಳು ಮನೆಯೊಳಗೆ ನುಗ್ಗುತ್ತವೆ. ಜೀವಭಯ ಬಿಟ್ಟು ನಾವು ಬದುಕು ಸಾಗಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಬಸವಾಪುರ ಗ್ರಾಮದ ಬಟ್ಟಮ್ಮ, ಭಾಗ್ಯ.
ಹಣ ಬಿಡುಗಡೆಯಾಗಲಿ: ಬಸವ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ತೀರಾ ಹಿಂದುಳಿದ ಸಮುದಾಯದವರಾಗಿದ್ದಾರೆ. ಬಡತನವೂ ಹೆಚ್ಚಾಗಿದೆ. ಇರುವ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಇವರು ಸಾಲ ಮಾಡಿ ಅಡಿಪಾಯ ಹಾಕಿಕೊಂಡಿದ್ದಾರೆ. ಆದರೆ, ಕೆಲವು ತಾಂತ್ರಿಕ ಕಾರಣಗಳ ನೆಪವೊಡ್ಡಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಪಂಚಾಯ್ತಿ ಸಬೂಬು ಹೇಳುತ್ತಿದೆ. ಇವರ ಕಷ್ಟಕ್ಕೆ ಕೂಡಲೇ ಸಂಬಂಧಪಟ್ಟವರು ಕ್ರಮ ವಹಿಸಿ ನಿರ್ಗತಿಕರಿಗೆ ಸೂರು ಒದಗಿಸಬೇಕು ಎಂದು ಗ್ರಾಮದ ಸ್ವಾಮಿ, ಮಣಿಕಂಠ ಮತ್ತಿತರರು ದೂರಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ತೊಂದರೆ, ಶೀಘ್ರ ಪರಿಹಾರ: ಕೆಸ್ತೂರು ಗ್ರಾಪಂ ವ್ಯಾಪ್ತಿಯಲ್ಲಿ 2018 ರಲ್ಲೇ 38 ಫಲಾನುಭವಿಗಳನ್ನು ಬಸವ ವಸತಿ ಯೋಜನೆ ಮೂಲಕ ಆಯ್ಕೆ ಮಾಡಲಾಗಿತ್ತು. ಆದರೆ, ಕೆಲವು ತಾಂತ್ರಿಕ ದೋಷಗಳಿಂದ ಇವರಿಗೆ ಇನ್ನೂ ಒಂದೂ ಬಿಲ್ ಆಗಿಲ್ಲ. ಈ ನಡುವೆ, ಕೊಡಗಿನಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಯಾಗಿರಲಿಲ್ಲ.
ನಂತರ ಜಿಪಂ ಸಿಇಒ ವರ್ಗಾವಣೆಗೊಂಡರು ಹಾಗೂ ಈಗ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಬಿಲ್ ತಡವಾಗಿದೆ. ಎಲ್ಲಾ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಆದಷ್ಟು ಬೇಗ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಪಿಡಿಒ ಲಲಿತಾ ತಿಳಿಸಿದ್ದಾರೆ.
* ಫೈರೋಜ್ ಖಾನ್