ಪಣಜಿ: ಸುಮಾರು 12 ವರ್ಷಗಳ ನಂತರ ಅ.26 ರಂದು ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಅದಕ್ಕಾಗಿ ಎಲ್ಲ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಅ. 20 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 37ನೇ ರಾಷ್ಟ್ರೀಯ ಕ್ರೀಡಾಕೂಟದ ಆತಿಥೇಯ ಪಟ್ಟ ಗೋವಾಕ್ಕೆ ಸಿಕ್ಕಿರುವುದು ರಾಜ್ಯದ ಭಾಗ್ಯದ ಸಂಗತಿ. ಮತ್ತೆ ಅಂತಹ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದ್ದರಿಂದ ರಾಜ್ಯದ ನಾಗರಿಕರು ಸ್ಪರ್ಧೆಯನ್ನು ವೀಕ್ಷಿಸಿದ ಅನುಭವ ಪಡೆಯಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅ.26 ರಂದು ಸಂಜೆ 6:30 ಕ್ಕೆ ಮಡಗಾಂವನ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ಗೋವಾದಲ್ಲಿ ಈ ಸ್ಫರ್ಧೆ ಆಯೋಜನೆಯ ಅವಕಾಶ ಪಡೆಯಲು ನಾವು 12 ವರ್ಷಗಳ ಕಾಲ ಕಾಯಬೇಕಾಯಿತು ಎಂದು ಪ್ರಮೋದ್ ಸಾವಂತ್ ಹೇಳಿದರು. ಈಗ ಕ್ರೀಡಾ ಸ್ಪರ್ಧೆಗೆ ಸಿದ್ಧವಾಗಿದೆ. ಈ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ರಾಜ್ಯದಲ್ಲಿ ನಡೆಯುವ ಈ ಮಹಾ ಸ್ಪರ್ಧೆಗೆ ಅವರನ್ನು ಸ್ವಾಗತಿಸುತ್ತೇನೆ. ಪ್ರಥಮ ಬಾರಿಗೆ ಗರಿಷ್ಠ 43 ಕ್ರೀಡೆಗಳನ್ನು ಸ್ಪರ್ಧೆಯಲ್ಲಿ ಸೇರಿಸಲಾಗಿದ್ದು, ದೇಶದ 8 ಸಾಂಪ್ರದಾಯಿಕ ಕ್ರೀಡೆಗಳು ಮತ್ತು 5 ಜಲ ಕ್ರೀಡೆಗಳನ್ನು ಸಹ ಸೇರಿಸಲಾಗಿದೆ. ಸ್ಪರ್ಧೆಯು ನವೆಂಬರ್ 9 ರಂದು ಕೊನೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ಮಡಗಾಂವ ಜವಾಹರ್ ಲಾಲ್ ನೆಹರು ಕ್ರೀಡಾಂಗಣದ ಸಾಮರ್ಥ್ಯ 12 ಸಾವಿರ. ಉದ್ಘಾಟನಾ ಸಮಾರಂಭವು ಎಲ್ಲರಿಗೂ ಮುಕ್ತವಾಗಿರುತ್ತದೆ ಮತ್ತು ಕಾರ್ಯಕ್ರಮವನ್ನು ರಾಜ್ಯದ 10 ಸ್ಥಳಗಳಲ್ಲಿ ಬೇರ ಪ್ರಸಾರ ಮಾಡಲಾಗುತ್ತದೆ. ಅ. 20 ರೊಳಗೆ ಸ್ಪರ್ಧೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಅಸ್ತಿತ್ವದಲ್ಲಿರುವ ಕ್ರೀಡಾ ಸೌಲಭ್ಯಗಳನ್ನು ನಾವು ಮರುಬಳಕೆ ಮಾಡುತ್ತಿದ್ದೇವೆ. ಕೆಲವು ಸೌಲಭ್ಯಗಳನ್ನು ಹೊಸದಾಗಿ ರಚಿಸಲಾಗಿದೆ. ಈ ಹಿಂದೆ ಸ್ಪರ್ಧೆಯ ಲಾಂಛನ, ನಾಮಫಲಕ, ಸ್ಪರ್ಧಾ ಗೀತೆ, ಜ್ಯೋತಿ ಅನಾವರಣ ಮುಂತಾದ ಕಾರ್ಯಕ್ರಮಗಳ ಮೂಲಕ ಕ್ರೀಡಾ ಪರಿಸರ ನಿರ್ಮಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಗಾವಡೆ, ಜಿಟಿಸಿಸಿ ಮುಖ್ಯಸ್ಥ ಅಮಿತಾಬ್ ಶರ್ಮಾ, ಕ್ರೀಡಾ ಇಲಾಖೆ ಕಾರ್ಯದರ್ಶಿ ಸ್ವೇತಿಕಾ ಸಚಿನ್ ಉಪಸ್ಥಿತರಿದ್ದರು.