ಮಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ ಸವಾರರ ಬಗ್ಗೆ ಮಂಗಳೂರು ಪೊಲೀಸರು ಬೆಂಗಳೂರಿನ ಪೊಲೀಸರ ಹಾಗೆ ದಂಡ ವಿಧಿಸುವಷ್ಟು ಕಠಿನ ಕ್ರಮಕ್ಕೆ ಮುಂದಾಗಿಲ್ಲ; ಬದಲಾಗಿ ವಾಹನವನ್ನು ಒಂದು ದಿನದ ಮಟ್ಟಿಗೆ ಮುಟ್ಟುಗೋಲು ಹಾಕಿ ಬಳಿಕ ನೋಟಿಸು ನೀಡಿ ಬಿಡುಗಡೆ ಮಾಡುವ ಮೂಲಕ ಒಂದಷ್ಟು ಔದಾರ್ಯ ತೋರಿದ್ದಾರೆ.
ಆದರೆ ಮುಟ್ಟುಗೋಲು ಹಾಕಿದ ವಾಹನದ ಬಗ್ಗೆ ಮಾಹಿತಿಯನ್ನು ಆಟೊಮೇಶನ್ ಸೆಂಟರ್‌ಗೆ ಅಪ್‌ಲೋಡ್ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ದಂಡ ಪಾವತಿಸುವಂತೆ ನೋಟಿಸ್ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ದಂಡ ವಿಧಿಸಬೇಕೇ ಬೇಡವೇ ಎನ್ನುವ ಬಗ್ಗೆ ನಿರ್ಧಾರ ಆಗಿಲ್ಲ. ದಂಡ ವಿಧಿಸಬೇಕೆಂಬ ನಿರ್ಧಾರ ತಳೆದರೆ ದಂಡ ಪಾವತಿಸಬೇಕಾಗುತ್ತದೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಬರೋಬ್ಬರಿ 3,753 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಬೆಳಗ್ಗೆ ವಶಪಡಿಸಿದ ವಾಹನಗಳನ್ನು ಠಾಣೆಗೆ ಕೊಂಡೊಯ್ದು ಸಂಜೆ ವೇಳೆಗೆ ನೋಟಿಸ್ ನೀಡಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರ ಹೊರತಾಗಿ ಎ. 1ರಿಂದ 30ರ ವರೆಗಿನ ಒಂದು ತಿಂಗಳ ಅವಧಿಯಲ್ಲಿ ಇತರ ಮೋಟಾರು ವಾಹನ ನಿಯಮ ಉಲ್ಲಂಘನೆ ಕುರಿತಂತೆ ಮೋಟಾರು ವಾಹನ ಕಾಯ್ದೆಯಡಿ 142 ಪ್ರಕರಣಗಳನ್ನು ದಾಖಲಿಸಿ 80,800 ರೂ. ದಂಡ ವಸೂಲಿ ಮಾಡಲಾಗಿದೆ. ವಾಹನಗಳ ಓಡಾಟ ಕಡಿಮೆ ಆಗಿದ್ದರಿಂದ ಪ್ರಕರಣಗಳ ಸಂಖ್ಯೆ ಮತ್ತು ದಂಡ ಮೊತ್ತ ಕಡಿಮೆಯಾಗಿದೆ.
ಲಾಕ್‌ಡೌನ್ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸರು ಪ್ರತಿನಿತ್ಯ ವಾಹನ ಮುಟ್ಟುಗೋಲು ಹಾಕುತ್ತಿದ್ದರೂ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸಿದವರ ಸಂಖ್ಯೆ ಕಡಿಮೆಯಾಗಿಲ್ಲ.
ಎ. 8ರಂದು ಗರಿಷ್ಠ ಅಂದರೆ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. ಎ. 4ರಂದು 284 ಹಾಗೂ ಎ. 6ರಂದು 268 ವಾಹನ ಮುಟ್ಟುಗೋಲು ಆಗಿತ್ತು. ಎ. 25ರಂದು ಅತ್ಯಂತ ಕಡಿಮೆ ಅಂದರೆ 25 ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು. ಎ. 26ರಂದು 30 ವಾಹನ ಹಾಗೂ ಎ. 13ರಂದು 30 ವಾಹನ ವಶಪಡಿಸಲಾಗಿತ್ತು. ಎ. 25 ಮತ್ತು 26ರಂದು ಮುಟ್ಟುಗೋಲು ಹಾಕಿದ್ದ ವಾಹನಗಳ ಸಂಖ್ಯೆ ಕನಿಷ್ಠ ಆಗಿದ್ದರೂ ಮುಂದಿನ ದಿನಗಳಲ್ಲಿ ಅದರ ಪ್ರಮಾಣ ಜಾಸ್ತಿಯಾಗಿ ಎ. 29ರಂದು 104 ಹಾಗೂ ಎ. 30ರಂದು 109 ಕ್ಕೇರಿತ್ತು.
ಎ. 8ರಂದು ಗರಿಷ್ಠ
ಎ. 8ರಂದು ಗರಿಷ್ಠ ಅಂದರೆ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. ಎ. 4ರಂದು 284 ಹಾಗೂ ಎ. 6ರಂದು 268 ವಾಹನ ಮುಟ್ಟುಗೋಲು ಆಗಿತ್ತು. ಎ. 25ರಂದು ಅತ್ಯಂತ ಕಡಿಮೆ ಅಂದರೆ 25 ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು.
ಅನಗತ್ಯ ಸಂಚಾರ ಬೇಡ
ಲಾಕ್‌ಡೌನ್ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನಗಳನ್ನು ರಸ್ತೆಗಿಳಿಸಿದವರ ವಾಹನಗಳನ್ನು ಮುಟ್ಟುಗೋಲು ಹಾಕಿ ವಾಹನ ಮಾಲಕರಿಗೆ ನೋಟಿಸ್ ನೀಡಲಾಗಿದೆ. ದಂಡ ವಿಧಿಸಿಲ್ಲದಿದ್ದರೂ ಮಾಹಿತಿಯನ್ನು ಆಟೋಮೇಶನ್ ಸೆಂಟರ್‌ಗೆ ಕಳುಹಿಸಲಾಗಿದೆ. ಜನರು ಕಾನೂನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು.
– ಲಕ್ಷ್ಮೀಗಣೇಶ್ ಡಿಸಿಪಿ