Advertisement

ಮನೆಗೇ ಬರುತ್ತೆ 371 ಜೆ ಪ್ರಮಾಣ ಪತ್ರ

05:02 PM May 24, 2017 | |

ಆಳಂದ: 371 (ಜೆ)ನೇ ಪ್ರಮಾಣ ಪತ್ರವನ್ನು ಜೂನ್‌ ತಿಂಗಳಿಂದ ಅಭ್ಯರ್ಥಿಗಳ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು. ಪಟ್ಟಣದಲ್ಲಿ ಹೈದ್ರಾಬಾದ ಕರ್ನಾಟಕ ಜನಪರ ಹೋರಾಟ ತಾಲೂಕು ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಹೈಕ ಅಂದು- ಇಂದು -ಮುಂದು ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಪ್ರಮಾಣ ಪತ್ರಪಡೆಯಲು ಕಚೇರಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಜೂನ್‌ ತಿಂಗಳಿಂದ ಕಾಲೇಜು ಮಟ್ಟದಲ್ಲೇ ಸಿಬ್ಬಂದಿಗಳೊಂದಿಗೆ ತೆರಳಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ದಾಖಲೆ, ಬೆರಳು ಗುರುತು ಪಡೆದು ಸ್ಥಳದಲ್ಲೇ 371ನೇ ಪ್ರಮಾಣ ಪತ್ರ ವಿತರಣೆಗ್ರ ಕ್ರಮ ಕೈಗೊಳ್ಳಲಾಗುವುದು.

ಇದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು. ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆ ಮೂಡುತ್ತಿದೆ. ವಿದ್ಯಾರ್ಥಿಗಳು ಸಹ ಓದು, ಉದ್ಯೋಗದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿ ಸಹಾಯ, ಸಹಾನುಭೂತಿಗಳಾಗಿ ಮುನ್ನಡೆಯಬೇಕು.

ಸರ್ಕಾರ ಕೌಶಲ್ಯ ತರಬೇತಿ ನೀಡಲು ನಿರುದ್ಯೋಗಿಗಳ ಸಮೀಕ್ಷಾ ಕಾರ್ಯ ನಡೆಸುತ್ತಿದೆ. ಪ್ರತಿಯೊಬ್ಬರು ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು. ಲಕ್ಷ್ಮಣ ದಸ್ತಿ ಸೇರಿದಂತೆ ಅನೇಕರ ಹೋರಾಟದ ಪ್ರತಿಫಲವಾಗಿ ಇಂದು ಹಿಂದುಳಿದ ಹೈಕ ಪ್ರದೇಶ ಅಭಿವೃದ್ಧಿಗಾಗಿ 371ನೇ ಕಲಂ ಜಾರಿಗೆ ಬಂದು 1500 ಕೋಟಿ ರೂ. ಹರಿದು ಬಂದಿದೆ. ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ.

ಆದ್ದರಿಂದ ವಿದ್ಯಾರ್ಥಿಗಳು ಮತ್ತು ಯುವಕರು ಪರಿವರ್ತನೆ ಹಾದಿಯಲ್ಲಿ ಸಾಗಿ ಅಭಿವೃದ್ಧಿಗೆ ನಾಂದಿಯಾಗಬೇಕು ಎಂದರು. ಹೈಕ ಹೋರಾಟ ಸಮಿತಿ ಹಿರಿಯ ಹೋರಾಟಗಾರ ಲಕ್ಷಣ ದಸ್ತಿ ಮಾತನಾಡಿ, ಕನ್ನಡಕ್ಕಾಗಿ ತ್ಯಾಗ ಮಾಡಿದ ಮತ್ತು ಸಾಮಾಜಿಕ ಕ್ರಾಂತಿ ಮಾಡಿದ ಬಸವಾದಿ ಶರಣರ ನಾಡು ಹೈಕ ಪ್ರದೇಶ ಸಮಗ್ರ ಅಭಿವೃದ್ಧಿಯಾಗಿ ಕಲ್ಯಾಣ ಕರ್ನಾಟಕ ನಾಮಕರಣವಾಗಬೇಕು ಎಂದು ಹೇಳಿದರು. 

Advertisement

ಸರ್ಕಾರ 371ನೇ ಕಲಂ ಜಾರಿಗೊಳಿಸಿದೆ. ಆದರೆ ಅನುಷ್ಠಾನ ಆಗುತ್ತಿಲ್ಲ. ಇದಕ್ಕಾಗಿ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆ ಸ್ಥಾಪಿಸುವ ಮೂಲಕ ಎಲ್ಲ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಹೈಕ ಪ್ರದೇಶದ ಇತಿಹಾಸದ ಬಗ್ಗೆ ಶಾಲೆ, ಕಾಲೇಜು ಪಠ್ಯಕ್ರಮದಲ್ಲಿ ಅಳವಡಿಸಬೇಕು. 

ಪ್ರದೇಶದ ಅಭಿವೃದ್ಧಿ ಅನುದಾನ ಶಿಕ್ಷಣ, ನೌಕರಿಗಾಗಿ ಸಂಪೂರ್ಣವಾಗಿ ಈ ಭಾಗದ ಜನರಿಗೆ ಸಿಗಬೇಕಾದ ಹಕ್ಕಿನ ಹೋರಾಟಕ್ಕೆ ಜನ ಮುಂದಾಗಬೇಕು ಎಂದು ಕರೆ ನೀಡಿದರು. ನಿರುದ್ಯೋಗಿಗಳ ಸಮೀಕ್ಷಾ ನೋಡಲ್‌ ಅಧಿಕಾರಿ ಜಾಫರ್‌ ಅನ್ಸಾರಿ ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಸದಸ್ಯ ರಾಮ ಹತ್ತರಕಿ, ಬಿಎಸ್‌ಎನ್‌ ವ್ಯವಸ್ಥಾಪಕ ಕಾರ್ತಿಕ ರಡ್ಡಿ, ವಿಶ್ವನಾಥ ಪವಾಡಶೆಟ್ಟಿ,

ಶಾಂತುಕುಮಾರ ಪೂಜಾರಿ, ಸಂತೋಷ ಭೈರಾಮಡಗಿ, ಧರ್ಮಸಿಂಗ್‌ ತಿವಾರಿ, ನಾಗಯ್ಯ ಸ್ವಾಮಿ, ಮಹ್ಮದಸಾಬ್‌ ಜಮಾದಾರ, ಸಾಯಿನಾಥ ಗೌಡಗಾವಿ, ಅಭಿಜೀತ ಪಾಟೀಲ, ಸುರಜ್‌ ಪತಂಗೆ, ಅಶ್ಪಾಕ್‌ ಮುಲ್ಲ, ಮಹಾದೇವ ಮಾಳಿ ಹಾಜರಿದ್ದರು. ಯುವಕರು ಮತ್ತು ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಗುರುದೇವಿ ಪಾಟೀಲ ನಿರೂಪಿಸಿದರು. ಶರಣು ಕಲಕರ್ಣಿ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next