ಧಾರವಾಡ: ಪ್ರಸಕ್ತ ಸಾಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಸರ್ಕಾರವು ಜಿಲ್ಲೆಗೆ ನಿಗದಿಪಡಿಸಿರುವ 37.10 ಕೋಟಿ ರೂ. ಅನುದಾನ ಬಳಕೆಗೆ ಜಿಪಂದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಅನುಮೋದನೆ ದೊರೆಯಿತು.
ಕ್ರಿಯಾ ಯೋಜನೆ ತಯಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮಾತನಾಡಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರತಿ ವ್ಯಕ್ತಿಗೆ ಕನಿಷ್ಠ 55 ಲೀಟರ್ ನೀರು ಪ್ರತಿನಿತ್ಯ ಬೇಕಾಗುತ್ತದೆ. ಈಗಾಗಲೇ ಈ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿರುವ ಗ್ರಾಮಗಳನ್ನು ಹೊರತುಪಡಿಸಿ ತೀವ್ರ ಸಂಕಷ್ಟದಲ್ಲಿರುವ ಜನವಸತಿಗಳನ್ನು ಗುರುತಿಸಿ, ವಿವರಗಳನ್ನು ಜೂ. 1ರೊಳಗೆ ಎಲ್ಲಾ ಸದಸ್ಯರು ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಸಂಶಿ ಹಾಗೂ ಕುಂದಗೋಳ ಭಾಗದ ಗ್ರಾಮಗಳಲ್ಲಿ, ನವಲಗುಂದ ತಾಲೂಕು ಬೆನ್ನೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 458 ಶುದ್ಧ ಕುಡಿಯುವ ನೀರು ಘಟಕಗಳು ಇವೆ. ಅವುಗಳಲ್ಲಿ 398 ಕಾರ್ಯ ನಿರ್ವಹಿಸುತ್ತಿದ್ದು, 60 ದುರಸ್ತಿಯಲ್ಲಿವೆ. ಆರ್‌ಒ ಘಟಕಗಳ ನಿರ್ವಹಣೆ ಗ್ರಾಪಂಗಳ ವ್ಯಾಪ್ತಿಗೆ ಬರುತ್ತದೆ. ಗ್ರಾಪಂಗಳ ವ್ಯಾಪ್ತಿಯಲ್ಲಿ ನುರಿತ ಕುಶಲಕರ್ಮಿಗಳು ಲಭ್ಯವಾಗದೇ ಎಲ್ಲೆಡೆ ಸಮಸ್ಯೆ ತಲೆದೋರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿರ್ವಹಣೆ ಹೊಣೆಯನ್ನು ಮಹಾನಗರ ಪಾಲಿಕೆಗಳ ಮಾದರಿಯಲ್ಲಿ ಖಾಸಗಿ ಏಜೆನ್ಸಿಗಳಿಗೆ ವಹಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ವಿ. ಮುನವಳ್ಳಿ ಮಾತನಾಡಿ, 2019-20ನೇ ಸಾಲಿನಲ್ಲಿ ಜಿಲ್ಲೆಗೆ ರಾಷ್ಟ್ರೀಯ ಗಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಡಿ 32.35 ಕೋಟಿ ಹಾಗೂ ಡಾ| ಡಿ.ಎಂ. ನಂಜುಂಡಪ್ಪ ವರದಿ ಆಧರಿಸಿ ರೂಪಿಸಲಾಗಿರುವ ವಿಶೇಷ ಅಭಿವೃದ್ಧಿ ಯೋಜನೆಯಡಿ 4.75 ಕೋಟಿ ರೂ. ಸೇರಿ ಒಟ್ಟು 37.10 ಕೋಟಿ ರೂ. ಅನುದಾನವನ್ನು ಸರ್ಕಾರ ನಿಗದಿಪಡಿಸಿದೆ ಎಂದರು. ವಿವಿಧ ಕ್ಷೇತ್ರದ ಜಿಪಂ ಸದಸ್ಯರು ತಮ್ಮ ಸಲಹೆ-ಸೂಚನೆ ನೀಡಿದರು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ ಶಿವನಗೌಡರ, ಕಲ್ಲಪ್ಪ ಪುಡಕಲಕಟ್ಟಿ, ನಿಂಗಪ್ಪ ಘಾಟಿನ್, ಉಪಕಾರ್ಯದರ್ಶಿ ಎ.ಎಂ. ಪಾಟೀಲ ಇದ್ದರು.