ನವದೆಹಲಿ : ಸೂಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ, ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದ್ದು ಬುಧವಾರ, 360 ಭಾರತೀಯರನ್ನು ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಿಂದ ನವದೆಹಲಿಗೆ ಕರೆತರಲಾಗುತ್ತಿದೆ.
ಭಾರತವು ತನ್ನ ಮೂರು ಸಾವಿರ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿದ್ದು, ಯೋಜನೆ ಕಾರ್ಯಗತಗೊಳಿಸಲು, ಎರಡನೇ ನೌಕಾ ಹಡಗು INS ಟೆಗ್ ಕೂಡ ಸುಡಾನ್ ಕರಾವಳಿಯನ್ನು ತಲುಪಿದೆ. ಇದಲ್ಲದೆ, ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮದ ಸಮಯದಲ್ಲಿ, ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಲ್ಲಿ ಸಿಲುಕಿರುವ 278 ಭಾರತೀಯರ ಮೊದಲ ಬ್ಯಾಚ್ ಐಎನ್‌ಎಸ್ ಸುಮೇಧಾದಿಂದ ಜೆಡ್ಡಾಕ್ಕೆ ತೆರಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಜೆಡ್ಡಾದಿಂದ ಭಾರತೀಯ ನಾಗರಿಕರನ್ನು ದೇಶಕ್ಕೆ ಕರೆತರಲಾಗುತ್ತದೆ. ಐಎನ್‌ಎಸ್ ಟೆಗ್ ಮತ್ತು ಆಪರೇಷನ್ ಕಾವೇರಿ ಅಡಿಯಲ್ಲಿ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಅಗತ್ಯವಾದ ಪರಿಹಾರ ಸಾಮಗ್ರಿಗಳೊಂದಿಗೆ ಸೂಡಾನ್ ಕರಾವಳಿಯಲ್ಲಿರುವ ರಾಯಭಾರ ಕಚೇರಿಗೆ ತಲುಪಿದ್ದಾರೆ ಎಂದು ಹೇಳಿದರು.
ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ಕೂಡ ತೆರಳಿದ್ದು, ಭಾರತೀಯರನ್ನು ಸ್ಥಳಾಂತರಿಸಲು ಸೂಡಾನ್ ಮತ್ತು ಜೆಡ್ಡಾದಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಜೆಡ್ಡಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು. ಸುಡಾನ್‌ನಲ್ಲಿ ಕಳೆದ 12 ದಿನಗಳಿಂದ ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ನಡೆದ ಭೀಕರ ಯುದ್ಧದಲ್ಲಿ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಭಾರತದ ಪ್ರಯತ್ನದ ನಡುವೆ ಸೂಡಾನ್ ನ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆ (ಆರ್‌ಎಸ್‌ಎಫ್) 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ.