Advertisement

36 ಸಾವಿರ ಪಡಿತರದಾರರಿಗೆ ಬ್ಯಾಂಕ್‌ ಖಾತೆ ಇಲ್ಲ!

12:39 PM Jul 11, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಪಡಿತರ ಚೀಟಿ ದಾರರ ಪೈಕಿ ಬರೋಬ್ಬರಿ 36,577 ಸಾವಿರ ಪಡಿ ತರದಾರರಿಗೆ ಬ್ಯಾಂಕ್‌ ಖಾತೆಯೇ ಇಲ್ಲದ ಕಾರಣ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಹಣ ಪಾವತಿ ಸುವ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

Advertisement

ಹೌದು, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆ.ಜಿ. ಅಕ್ಕಿ ಕೊಡಲು ಸಾಧ್ಯವಾಗದ ಕಾರಣ 5 ಕೆ.ಜಿ. ಅಕ್ಕಿ ಕೊಟ್ಟು ಉಳಿದ 5 ಕೆ.ಜಿ. ಅಕ್ಕಿಗೆ ಪ್ರತಿ ಕೆ.ಜಿ.ಗೆ 34 ರೂ. ದರ ನಿಗದಿಪಡಿಸಿ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ಅಕ್ಕಿ ವಿತರಿಸು ವವರೆಗೂ ತಲಾ 170 ರೂ. ಹಣವನ್ನು ಡಿಬಿಟಿ ಮೂಲಕ ಕಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ನೇರ ಪಾವತಿಗೆ ಸೋಮವಾರ ಚಾಲನೆ ನೀಡಿದೆ.

ನೇರ ನಗದು ಪಾವತಿ ಆಗುವುದು ವಿಳಂಬ: ಜಿಲ್ಲೆಯಲ್ಲಿ ಒಟ್ಟು ಪಡಿತರ ಚೀಟಿದಾರರ ಪೈಕಿ ಜಿಲ್ಲಾದ್ಯಂತ 36,577 ಸಾವಿರ ಮಂದಿಗೆ ಬ್ಯಾಂಕ್‌ ಖಾತೆ ಹೊಂದಿಲ್ಲ. ಬಹಳಷ್ಟು ಪಡಿತರ ಚೀಟಿದಾ ರರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದ ಪರಿಣಾಮ 36 ಸಾವಿರ ಮಂದಿ ಮನೆ ಕುಟುಂಬ ಸ್ಥರಿಗೆ ಡಿಬಿಟಿ ಮೂಲಕ ನೇರ ನಗದು ಪಾವತಿ ಆಗುವುದು ವಿಳಂಬವಾಗಲಿದೆ.

ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಹಾಗೂ ಆದ್ಯತಾ ಪರಿತರ ಚೀಟಿಗಳ ಪ್ರತಿ ಫ‌ಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫ‌ಲಾನುಭವಿಗೆ ತಲಾ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಅಕ್ಕಿ ಖರೀದಿಗೆ ಸ್ಪಂದನೆ ಸಿಗದ ಕಾರಣ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ತಲಾ 10 ಕೆ.ಜಿ. ಅಕ್ಕಿ ವಿತರಿಸಲು ಅಗತ್ಯ ಇರುವ ಆಹಾರ ಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಮುಕ್ತ ಟೆಂಡರ್‌ ಕರೆಯಲು ನಿರ್ಧರಿಸಿದೆ.

ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ ದಾರರು ಆಹಾರ ಧಾನ್ಯವನ್ನು ಪೂರೈಕೆ ಮಾಡುವವರೆಗೂ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫ‌ಲಾನುಭವಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ 34 ರೂ. ರಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಗೆ ಒಟ್ಟು 170 ರೂ. ಹಣ ಅವರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಈಗ ಜಿಲ್ಲೆಯಲ್ಲಿ 36 ಸಾವಿರಕ್ಕೂ ಅಧಿಕ ಪಡಿತರ ಚೀಟಿದಾರರು ತಮ್ಮ ಬ್ಯಾಂಕ್‌ ಖಾತೆ ಹೊಂದದೇ ಇರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ.

Advertisement

ಆಧಾರ್‌ ಲಿಂಕ್‌ ಆಗಿಲ್ಲ: ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಜಿಲ್ಲೆಯ ಒಟ್ಟು 6 ತಾಲೂಕುಗಳಲ್ಲಿ 36 ಸಾವಿರ ಮಂದಿ ಪಡಿತರ ಚೀಟಿದಾರರಿಗೆ ಬ್ಯಾಂಕ್‌ ಖಾತೆ ಇಲ್ಲ. ಕೆಲವರು ಬ್ಯಾಂಕ್‌ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್‌ ಲಿಂಕ್‌ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್‌ ಖಾತೆ ಇಲ್ಲದವರು ಹಾಗೂ ಬ್ಯಾಂಕ್‌ ಖಾತೆ ಇದ್ದರೂ ಆಧಾರ್‌ ಲಿಂಕ್‌ ಆಗದ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಬ್ಯಾಂಕ್‌ ಖಾತೆ ಮಾಡಿಸುವಂತೆ ಸ್ಥಳೀಯ ಅಧಿಕಾರಿಗಳ ಹಾಗೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಫ‌ಲಾನುಭವಿಗಳಿಗೆ ಸೂಚಿಸಿದ್ದಾರೆ.

ಆಹಾರ ಇಲಾಖೆ ಉಪ ನಿರ್ದೇಶಕರು ಹೇಳಿದ್ದೇನು?: ಜಿಲ್ಲೆಯಲ್ಲಿ ಒಟ್ಟು 3,27,109 ಪಡಿತರ ಚೀಟಿಗಳಿದ್ದು, 1,09,0211 ಮಂದಿ ಫ‌ಲಾನುಭವಿಗಳಿದ್ದಾರೆ. ಆ ಪೈಕಿ ಎಎವೈ 28,415, ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್‌) ಒಟ್ಟು 2,79.651 ಕಾರ್ಡ್‌ಗಳು ಇವೆ. ಎಪಿಎಲ್‌ ಒಟ್ಟು 19,043 ಇವೆ. ಜಿಲ್ಲಾದ್ಯಂತ ಒಟ್ಟು 36 ಸಾವಿರ ಪಡಿತರ ಚೀಟಿದಾರರಿಗೆ ಬ್ಯಾಂಕ್‌ ಖಾತೆ ಇಲ್ಲ. ಈಗಾಗಲೇ ಬ್ಯಾಂಕ್‌ ಖಾತೆ ಇಲ್ಲದ ಹಾಗೂ ಆಧಾರ್‌ ಲಿಂಕ್‌ ಆಗದ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಬ್ಯಾಂಕ್‌ ಖಾತೆ ಮಾಡಿಸುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಸವಿತಾ ಅವರು ಉದಯವಾಣಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 3.27 ಲಕ್ಷ ಪಡಿತರ ಚೀಟಿಗಳು : ಜಿಲ್ಲೆಯಲ್ಲಿ ಒಟ್ಟು 2,79,651 ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್‌) ಇದ್ದು ಒಟ್ಟು, 9,08,451 ಮಂದಿ ಫ‌ಲಾನುಭವಿಗಳು ಇದ್ದಾರೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಪಡಿತರ ಚೀಟಿಗಳು ಜಿಲ್ಲೆಯಲ್ಲಿ 28,415 ಇದ್ದು 1,20,980 ಮಂದಿ ಫ‌ಲಾನುಭವಿಗಳಿದ್ದಾರೆ. ಎಪಿಎಲ್‌ ಕಾರ್ಡ್‌ದಾರರು ಜಿಲ್ಲೆಯಲ್ಲಿ 19,043 ಇದ್ದು 60,780 ಮಂದಿ ಫ‌ಲಾನುಭವಿಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,27,109 ಪಡಿತರ ಚೀಟಿದಾರರು ಹಾಗೂ 10,09,0211 ಮಂದಿ ಫ‌ಲಾನುಭವಿಗಳಿದ್ದಾರೆ.

ಎಎವೈ ಪಡಿತರ ಚೀಟಿದಾರರಿಗೆ ಇಲ್ಲ ನಗದು ಭಾಗ್ಯ : ಎಎವೈ ಅಂದರೆ ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಕಡುಬಡವರೆಂದು ಹೇಳಿ ಸರ್ಕಾರ ಈಗಾಗಲೇ 21 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಮೂರಕ್ಕಿಂತ ಹೆಚ್ಚು ಮಂದಿ ಇದ್ದರೆ ಮಾತ್ರ ಒಬ್ಬರಿಗೆ 170 ರೂ. ಹಣ ಸಿಗುತ್ತದೆ. 3ಕ್ಕಿಂತ ಎಷ್ಟೇ ಮಂದಿ ಇದ್ದರೂ ಪ್ರತಿಯೊಬ್ಬರಿಗೂ 170 ರೂ. ನಗದು ಸೌಲಭ್ಯ ಸಿಗುತ್ತದೆ ಎಂದು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಗೆ 17.85 ಕೋಟಿ ಬಿಡುಗಡೆ : ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್‌ ) ಪ್ರತಿ ಫ‌ಲಾನುಭವಿಗೆ ಪ್ರತಿ ತಿಂಗಳು 05 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಕೆ.ಜಿ.ಗೆ 43 ರೂ. ರಂತೆ ಪಡಿತರ ಚೀಟಿಯಲ್ಲಿರುವ ಕುಟುಂಬ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲು ರಾಜ್ಯ ಸರ್ಕಾರ ಸೋಮವಾರ ಜಿಲ್ಲೆಗೆ ಬರೋಬ್ಬರಿ 17.685 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದು, ಈ ತಿಂಗಳೊಳಗೆ ಪಡಿತರ ಚೀಟಿದಾರರ ಮುಖ್ಯಸ್ಥರು ಹೊಂದಿರುವ ಬ್ಯಾಂಕ್‌ ಖ್ಯಾತೆಗೆ ವರ್ಗಾವಣೆಗೊಳ್ಳಲಿದೆ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next