Advertisement

ನಿನ್ನೆ ಒಂದೇ ದಿನ 36 ಸೋಂಕು ಪ್ರಕರಣ ದೃಢ

07:53 AM May 17, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಕರಾಳಛಾಯೆ ದಿನೇದಿನೆ ಹೆಚ್ಚುತ್ತಿದ್ದು, ಶನಿವಾರ ಒಂದೇ ದಿನ ರಾಜ್ಯದಲ್ಲಿ 36 ಪ್ರಕರಣ ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ  14, ಕಲಬುರಗಿಯಲ್ಲಿ 8, ಹಾಸನದಲ್ಲಿ 4, ಶಿವಮೊಗ್ಗದಲ್ಲಿ 3, ಮಂಡ್ಯ, ಉಡುಪಿ, ಧಾರವಾಡ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಬಳ್ಳಾರಿಯಲ್ಲಿ ತಲಾ ಒಂದು ಪ್ರಕರಣ ಹೊಸದಾಗಿ ವರದಿಯಾಗಿದೆ.

Advertisement

ಇದರೊಂದಿಗೆ 48  ಗಂಟೆಗಳಲ್ಲಿ 105 ಮಂದಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ವರದಿಯಾದ ಎಲ್ಲ ಪ್ರಕರಣಗಳು ಶಿವಾಜಿನಗರದ ಹೋಟೆಲ್‌ ಹೌಸ್‌ ಕಿಪಿಂಗ್‌ ಸಿಬ್ಬಂದಿಯ (ರೋಗಿ 653) ದ್ವಿತೀಯ ಸಂಪರ್ಕದಿಂದ ಹರಡಿದೆ. ಈ ವ್ಯಕ್ತಿಯಿಂದ ಎರಡು ದಿನಗಳಲ್ಲಿ 25 ಮಂದಿ ಸೋಂಕಿತರಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕೂಡ ಹೆಚ್ಚಿನ ನಿಗಾವಹಿಸಲು ಆರಂಭಿಸಿದೆ. ಕಲಬುರಗಿಯಲ್ಲಿ 10 ವರ್ಷದ ಬಾಲಕಿ ಸೇರಿ 7ಮಂದಿಗೆ ಇಬ್ಬರು ರೋಗಿಗಳಿಂದ ಸೋಂಕು ಹರಡಿದೆ.  ಮುಂಬೈಗೆ ಪ್ರಯಾಣ ಮಾಡಿ ವಾಪಸ್ಸಾಗಿದ್ದ ಅಲ್ಲಿನ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ವಿಜಯಪುರದಲ್ಲಿ 594ನೇ ರೋಗಿಯ ಸಂಪರ್ಕದಿಂದ 4 ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿದೆ. ಇನ್ನು ಕೆಲವು ದಿನಗಳ ಹಿಂದೆ  ಹಸಿರು ವಲಯದಲ್ಲಿದ್ದ ಹಾಸನದಲ್ಲಿ ಈಗ 20 ಪ್ರಕರಣ ದೃಢಪಟ್ಟಿದೆ. ಒಂದೇ ದಿನ ನಾಲ್ಕು ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲವೂ ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದೆ. ಹಾಗೆಯೇ ಶನಿವಾರ ಶಿವಮೊಗ್ಗ ದಲ್ಲಿ ದೃಢಪಟ್ಟಿದ್ದ ಮೂರು ಪ್ರಕರಣಕ್ಕೂ ಮುಂಬೈ ಪ್ರಯಾಣದ ಹಿಸ್ಟರಿಯಿದೆ. ಒಟ್ಟಾರೆಯಾಗಿ 36 ಪ್ರಕರಣಗಳಲ್ಲಿ 10ಕ್ಕೆ ಮಹಾರಾಷ್ಟ್ರದ ನಂಟಿದ್ದರೆ, ತಲಾ ಒಂದೊಂದು ದುಬೈ, ಅಹಮದಬಾದ್‌ ಪ್ರಯಾಣ ಹಿನ್ನೆಲೆಯಿದೆ ಎಂದು ಆರೋಗ್ಯ ಇಲಾಖೆ  ತಿಳಿಸಿದೆ.

ಕ್ರಿಮಿನಲ್‌ ಮೊಕದ್ದಮೆ: ಬೆಂಗಳೂರಿನ ಪಾದರಾಯನಪುರದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ 45 ವರ್ಷದ ವ್ಯಕ್ತಿಯಲ್ಲಿ ಮೇ 9ರಂದು ಸೋಂಕು ದೃಢಪಟ್ಟಿತ್ತು. ನಿಯಮದ ವಿರುದ್ಧವಾಗಿ ಕಂಟೈನ್ಮೆಂಟ್‌  ವಲಯದಿಂದ ಅವರು ತುಮಕೂರಿನ ಶಿರಾಗೆ ಹೋಗಿದ್ದರು. ಹಾಗಾಗಿ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು. ಕಂಟೈನ್ಮೆಂಟ್‌ ವಲಯದಿಂದ ಯಾರು ಕೂಡ ಹೊರಗೆ ಹೋಗುವಂತಿಲ್ಲ. ಹೀಗಿದ್ದರೂ ಕೋವಿಡ್‌ 19 ದೃಢಪಟ್ಟಿ ವ್ಯಕ್ತಿ ಹೊರಗೆ ಹೋಗಿರುವುದು ಕಾನೂನಿಗೆ ವಿರುದ್ಧವಾಗಿದೆ.

ಹೀಗಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಿದ್ದೇವೆ. ಪಾದರಾಯನಪುರದಿಂದ ಬಿಬಿಎಂಪಿ ಹಾಗೂ ಪೊಲೀಸರು  ಹೈರಾಣಾಗಿದ್ದಾರೆ. ಕಂಟೈ ನ್ಮೆಂಟ್‌ ವಲಯದಿಂದ ಹೊರಗೆ ಹೋಗುವುದನ್ನು ತಡೆ ಯಲು ಎಲ್ಲ ರೀತಿಯ ಕ್ರಮ ಆಗುತ್ತಿದೆ. ಅಲ್ಲಿರು ವವರ ರಕ್ಷಣೆಗಾಗಿ ಕಂಟೈಮ್ಮೆಂಟ್‌ ವಲಯ ಮಾಡಿ ದ್ದರೂ, ಅಲ್ಲಿಯವರು ಸಹಕರಿಸುತ್ತಿಲ್ಲ. ಕಾಂಪೌಂಡ್‌ ಹಾರುತ್ತಿವುದು ಬೆಳಕಿಗೆ ಬಂದಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

559 ಕ್ರಿಯಾಶೀಲ ಪ್ರಕರಣ: ರಾಜ್ಯದಲ್ಲಿ ಶನಿವಾರ 36 ಪ್ರಕರಣ ಕಾಣಿಸಿಕೊಂಡಿದ್ದರಿಂದ ಈಗ 1092 ಸೋಂಕಿತ ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 559 ಕ್ರಿಯಾಶೀಲವಾಗಿರುವ ಪ್ರಕರಣವಾಗಿದೆ. 496 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ  ಕೋವಿಡ್‌ 19 ಮಹಾಮಾರಿಗೆ 36 ಮಂದಿ ಬಲಿಯಾಗಿದ್ದಾರೆ. ಹಾಗೆಯೇ 13 ಮಂದಿ ನಿಗದಿತ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ  ದಿನ ಬೆಂಗಳೂ ರಿನಲ್ಲಿ 14 ಮಂದಿ ಗುಣಮುಖರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next