Advertisement

ಕನ್ನಡ ಛಾಯಾಗ್ರಾಹಕರ ಸಂಘಕ್ಕೆ 35ರ ಸಂಭ್ರಮ

03:08 PM Jul 20, 2019 | Team Udayavani |

ಕನ್ನಡ ಚಿತ್ರರಂಗದ ಛಾಯಾಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, “ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ’ಕ್ಕೀಗ 35ರ ಸಂಭ್ರಮ. ಹೌದು, ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಛಾಯಾಗ್ರಾಹಕರ ಪಾಲು ಇದೆ. ಛಾಯಾಗ್ರಾಹಕರೆಲ್ಲರೂ ಒಗ್ಗೂಡಿ ಮಾಡಿಕೊಂಡಿರುವ “ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ’ ಈಗ 35 ವರ್ಷಗಳನ್ನ ಪೂರೈಸಿದೆ.

Advertisement

ಈ ಹಿನ್ನೆಲೆಯಲ್ಲಿ ಭಾನುವಾರ “ಸಿನಿ 35 ಕುಟುಂಬದ ಸಮಾರಂಭ’ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ, ನಿರ್ಮಾಪಕ, ನಿರ್ದೇಶಕ, ಕಾರ್ಮಿಕರ ಒಕ್ಕೂಟ, ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ಕನ್ನಡ ಚಿತ್ರರಂಗ ಇಂದು ಉತ್ತಮ ಬೆಳವಣಿಗೆಯಲ್ಲಿದೆ ಎಂಬುದು ಒಂದು ಖುಷಿಯಾದರೆ, ಇನ್ನೊಂದು ಕಡೆ ತಂತ್ರಜ್ಞ ರು ಆ ಖುಷಿಯಲ್ಲಿ ಇಲ್ಲ ಎಂಬುದೇ ಬೇಸರದ ಸಂಗತಿ. ಈಗ ಡಬ್ಬಿಂಗ್‌ ಸಂಸ್ಕೃತಿ ಹೆಚ್ಚಾಗುತ್ತಿದೆ. ಆ ವಿರುದ್ಧ ಹೋರಾಟವನ್ನೂ ಮಾಡಲಾಗಿತ್ತು.

ಆದರೆ, ನ್ಯಾಯಾಲಯದ ಆದೇಶ ಪಾಲಿಸಬೇಕಾಯಿತು. ಡಬ್ಬಿಂಗ್‌ ಬೇಕು ಎಂದವರು ಸೋತಿದ್ದಾರೆ. ಜನರೇ ಸಾರಸಗಟಾಗಿ ಅದನ್ನು ತಿರಸ್ಕರಿಸಿದ್ದಾರೆ. ಈಗ ನಮ್ಮ ಕನ್ನಡ ಕಲಾವಿದರು, ತಂತ್ರಜ್ಞರು ಬೆಳೆದಿದ್ದಾರೆ. ಗುಣಮಟ್ಟದ ಚಿತ್ರಗಳೂ ಬರುತ್ತಿವೆ. ಆದರೆ, ವಾರಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ನೋಡಿದಾಗ ಆಘಾತವಾಗುತ್ತದೆ.

ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಕರೆಕೊಟ್ಟರು ಸಾ.ರಾ.ಗೋವಿಂದು. ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ ಅವರಿಗೆ ಸಂಘ 35 ವಸಂತ ಪೂರೈಸಿರುವುದು ಖುಷಿಕೊಟ್ಟಿದೆ. ಈ ವೇಳೆ ಅವರೊಂದು ಮನವಿ ಮಾಡಿಕೊಂಡರು. ಆ ಬಗ್ಗೆ ಹೇಳಿಕೊಂಡ ಅಧ್ಯಕ್ಷ ಜೆ.ಜಿ.ಕೃಷ್ಣ, “ಎಲ್ಲಾ ಸಂಘಟನೆಗಳನ್ನು ಒಂದೇ ಧ್ವನಿಯಲ್ಲಿ ಮಾತನಾಡುವಂತೆ ವಾಣಿಜ್ಯ ಮಂಡಳಿ ಮಾಡಬೇಕು.

Advertisement

ಪರಭಾಷೆಯಿಂದ ಬರುವ ಛಾಯಾಗ್ರಾಹಕರು ನಮ್ಮ ಸಂಘದಲ್ಲಿ ನೋಂದಣಿ ಮಾಡಿಸಬೇಕು, ಇಲ್ಲಿರುವ ಸಹಾಯಕ ಛಾಯಾಗ್ರಾಹಕರಿಗೆ ಕೆಲಸ ಕೊಡುವಂತೆ ನಿರ್ದೇಶಕ ಸಂಘ ಶಿಫಾರಸ್ಸು ಮಾಡಬೇಕು. ಎಲ್ಲರಿಗೂ ಬಾಟ ಇರುವಂತೆ ಸಹಾಯಕರಿಗೂ ಬಾಟವನ್ನು ನಿರ್ಮಾಪಕ ಸಂಘದಿಂದ ನಿಗದಿಪಡಿಸಬೇಕು. ಕಾರ್ಮಿಕ ಒಕ್ಕೂಟ ಇಲ್ಲಿ ಒಂದೇ ಇದ್ದರೆ ಮಾತ್ರ ನಿರ್ಮಾಪಕರಿಗೆ ಅನುಕೂಲವಾಗುತ್ತದೆ.

ಇದನ್ನು ಒಕ್ಕೂಟ ಅನುಷ್ಠಾನಕ್ಕೆ ತರಬೇಕು. ನಮ್ಮಲ್ಲಿರುವ ಸಹಾಯಕರನ್ನು ಕಿರುತೆರೆ ಸಂಘಕ್ಕೆ ಸೇರಿಸಿಕೊಳ್ಳಬೇಕು’ ಎಂದು ಅಧ್ಯಕ್ಷ ಜೆ.ಜಿ.ಕೃಷ್ಣ ಮನವಿ ಮಾಡಿಕೊಂಡರು. ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳುವಂತೆ, “ಇಂದು ಸಮಸ್ಯೆಗಳಿಗಿಂತ ಸವಾಲುಗಳು ಜಾಸ್ತಿ. ಸಂಘ ನಮ್ಮ ಮುಂದಿಟ್ಟಿರುವ ವಿಷಯ ಕುರಿತಂತೆ ಎಲ್ಲರನ್ನೂ ಮಂಡಳಿಗೆ ಕರೆಸಿ ಮಾತನಾಡಲಾಗುತ್ತದೆ.

ಚಿತ್ರರಂಗದ ಇನ್ನಷ್ಟು ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹ ಇರಲಿ ಎಂದರು ಜೈರಾಜ್‌. ಈ ವೇಳೆ, ನಿರ್ಮಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಸೂರಪ್ಪಬಾಬು, ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ನಾಗೇಂದ್ರಪ್ರಸಾದ್‌ ಮಾತನಾಡಿದರು. ಮಂಡಳಿ ಪದಾಧಿಕಾರಿಗಳಾದ ಉಮೇಶ್‌ಬಣಕಾರ್‌,ನರಸಿಂಹಲು,ಎ.ಗಣೇಶ್‌, ಎನ್‌.ಎಂ.ಸುರೇಶ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next