ನವದೆಹಲಿ: ಭಾರತದಲ್ಲಿ 24ಗಂಟೆಗಳ ಅವಧಿಯಲ್ಲಿ 122 ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ದೇಶದ 17 ರಾಜ್ಯಗಳಲ್ಲಿ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 358 ಒಮಿಕ್ರಾನ್ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೆಂಗೇರಿ: 26 ವರ್ಷದ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಪತಿ ಬಂಧನ
ಮಹಾರಾಷ್ಟ್ರದಲ್ಲಿ ದಾಖಲೆ ಪ್ರಮಾಣದ 88 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದೆಹಲಿಯಲ್ಲಿ 67, ತೆಲಂಗಾಣದಲ್ಲಿ 38, ತಮಿಳುನಾಡಿನಲ್ಲಿ 34, ಕರ್ನಾಟಕದಲ್ಲಿ 31 ಹಾಗೂ ಗುಜರಾತ್ ನಲ್ಲಿ 30 ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿ ಇಂದು 6,650 ಕೋವಿಡ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶಾದ್ಯಂತ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,47,72,626ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 77,516ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.
ಕಳೆದ 57 ದಿನಗಳಿಂದ ಪ್ರತಿದಿನ ದೇಶದಲ್ಲಿ 15,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಕೋವಿಡ್ ಚೇತರಿಕೆ ಪ್ರಮಾಣ ಶೇ.98.04ರಷ್ಟಿದೆ. ಏತನ್ಮಧ್ಯೆ ಒಮಿಕ್ರಾನ್ ಸೋಂಕು ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಹಲವು ಮಾರ್ಗಸೂಚಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿವೆ.