Advertisement
ಮಹಾನಗರ: ಭವಿಷ್ಯದಲ್ಲಿ ನೀರಿನ ಹಾಹಾಕಾರ ಉಂಟಾಗದಂತೆ ತಡೆಯಲು ಈಗಿಂದಲೇ ಮಳೆಕೊಯ್ಲು ವ್ಯವಸ್ಥೆ ಅನುಸರಿಸುವುದು ಪ್ರತಿ ಮನೆಗೂ ಅವಶ್ಯ. ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಯತ್ತ ಜನರನ್ನು ಉತ್ತೇಜಿಸುವುದಕ್ಕೆ ಸರಕಾರವೂ ಆರ್ಥಿಕ ಸಹಾಯ ಮಾಡುತ್ತಿದೆ.ಬೇಸಗೆಯಲ್ಲಿ ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಈ ಸುವರ್ಣಾವಕಾಶ ಸದುಪಯೋಗಿಸಿಕೊಂಡು ಮಳೆಕೊಯ್ಲು ಅಳವಡಿಸಿ ಭವಿಷ್ಯದ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಕ್ಕೆ ಇದು ಸಕಾಲ.
ಭವಿಷ್ಯದಲ್ಲಿ ನೀರಿನ ಸಮಸ್ಯೆ ತಲೆದೋರ ದಂತಾಗಲು ನೀರನ್ನು ಹಿಡಿದಿಟ್ಟುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವುದೇ “ಉದಯವಾಣಿ-ಸುದಿನ’ದ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಉದ್ದೇಶ. “ಸುದಿನ’ ಪ್ರಕಟಿಸುತ್ತಿರುವ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು, ಅದನ್ನು ಅಳವಡಿಸಿಕೊಳ್ಳುವುದು ಹೇಗೆ, ಯಾರನ್ನು ಸಂಪರ್ಕ ಮಾಡಬೇಕು ಎಂಬ ಬಗ್ಗೆ ಜನರು ಸ್ವಯಂ ಪ್ರೇರಿತರಾಗಿ ಮುಂದಾಗಿರುವುದು ಶ್ಲಾಘನೀಯ.
Related Articles
Advertisement
ಮಳೆಕೊಯ್ಲಿಗೆ 35 ಸಾವಿರ ರೂ. ನೆರವುದ.ಕ. ಜಿ.ಪಂ. ವ್ಯಾಪ್ತಿಯ 230 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿಯೂ ಮಳೆ ನೀರು ಕೊಯ್ಲು, ಜಲಮರುಪೂರಣ ಘಟಕ ಸ್ಥಾಪಿಸಲು ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದೆ. ಮಳೆಕೊಯ್ಲನ್ನು ಮನೆಗಳಲ್ಲಿ ವೈಯಕ್ತಿಕವಾಗಿ ಅಳವಡಿಸಿಕೊಳ್ಳಲು ಯೋಜನೆಯಡಿ 35 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಇದರಿಂದ ಬೇಸಗೆಯಲ್ಲಿ ಕುಡಿಯುವ ನೀರು ಸಿಗುವುದರೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ.
ಖಾಸಗಿ ಬೋರ್‌ವೆಲ್‌ಗಳಿಗೆ ಜಲಮರುಪೂರಣ ವ್ಯವಸ್ಥೆ ಮಾಡಲು 19 ಸಾವಿರ ರೂ.ಗಳನ್ನು ಯೋಜನೆಯಡಿ ಪಡೆದುಕೊಳ್ಳ ಬಹುದು. ಸಾಮುದಾಯಿಕ ಉದ್ದೇಶಕ್ಕೆ ಜಲಮರುಪೂರಣ ಘಟಕ ಸ್ಥಾಪನೆಗೆ 3 ಲಕ್ಷ ರೂ.ಗಳನ್ನು ನರೇಗಾದಡಿ ಕಲ್ಪಿಸಲಾಗುತ್ತದೆ. ಇವಷ್ಟೇ ಅಲ್ಲದೆ, ವೈಯಕ್ತಿಕ ಬಾವಿ ತೋಡಲು 1 ಲಕ್ಷ ರೂ., ಕೃಷಿ ಹೊಂಡ ಮಾಡಲು 32 ಸಾವಿರ ರೂ.ಗಳಿಂದ 70 ಸಾವಿರ ರೂ., ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 5 ಲಕ್ಷ ರೂ.ಗಳವರೆಗೂ ನರೇಗಾದಡಿ ಸಾರ್ವಜನಿಕರಿಗೆ ಸರಕಾರ ಉಚಿತವಾಗಿ ಆರ್ಥಿಕ ಸಹಾಯ ನೀಡುತ್ತದೆ. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರಿ ಜಮೀನು ಎಂಬ ದಾಖಲೆ ಅಗತ್ಯ. ಸೌಲಭ್ಯ ಪಡೆಯುವುದು ಹೇಗೆ?
ಸಾರ್ವಜನಿಕರು ಸ್ಥಳೀಯ ಗ್ರಾ.ಪಂ.ಗೆ ತೆರಳಿ ನರೇಗಾದಡಿ ಮಳೆಕೊಯ್ಲು ಪದ್ಧತಿ ಅಳವಡಿಸಿ ಕೊಳ್ಳಲು ಆರ್ಥಿಕ ಸಹಾಯ ನೀಡಬೇಕು ಎಂದು ಕೇಳಿದರಾಯಿತು. ಬಳಿಕ ಪಂಚಾಯತ್‌ನವರ ಸಲಹೆಯಂತೆ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು.
ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ನಿಗದಿತ ಅವಧಿಯೊಳಗೆ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಮನೆಯವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳಬಹುದು. ಒಂದು ಬಾರಿ ಯೋಜನೆಯಡಿ ಸಹಾಯ ಪಡೆದವರಿಗೆ ಇನ್ನೊಮ್ಮೆ ಅವಕಾಶವಿಲ್ಲ. ಅರ್ಹತೆ-ದಾಖಲೆ
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು, ಸಣ್ಣ ಮತ್ತು ಅತೀ ಸಣ್ಣ ರೈತರು, ಅಲೆಮಾರಿ ಜನರು, ಸ್ತ್ರೀ ಪ್ರಧಾನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ಅಂಗವಿಕಲ ಪ್ರಧಾನ ಕುಟುಂಬಗಳು, ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳು ನರೇಗಾ ಯೋಜನೆಯಡಿ ಯಾವುದೇ ಕೆಲಸಗಳಿಗೆ ಆರ್ಥಿಕ ಸಹಾಯವನ್ನು ಪಡೆಯಬಹುದು. ಮಳೆಕೊಯ್ಲು ಅಳವಡಿಸಿಕೊಳ್ಳಲು ಈ ಅರ್ಹತಾ ಮಾನದಂಡವನ್ನೇ ಪರಿಗಣಿಸಲಾಗುತ್ತದೆ.
ಆರ್‌ಟಿಸಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್‌ನ ಪ್ರತಿ ಮತ್ತು ಬೋರ್‌ವೆಲ್ ಜಲ ಮರುಪೂರಣ ವ್ಯವಸ್ಥೆಗೆ ಸ್ವಂತ ಬೋರ್‌ವೆಲ್ ಎಂಬುದಕ್ಕೆ ದಾಖಲೆ. ಇವಿಷ್ಟು ದಾಖಲೆಗಳನ್ನು ಪಂಚಾಯತ್‌ನಲ್ಲಿ ನೀಡಿದರೆ ಆರ್ಥಿಕ ಸಹಾಯ ದೊರೆಯುತ್ತದೆ. ತಾ.ಪಂ. ಕಚೇರಿಯನ್ನು
ಸಂಪರ್ಕಿಸಿ
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ಜನರಿಗೆ ಆಸಕ್ತಿ ಇದ್ದರೆ ಕೂಡಲೇ ಮಂಗಳೂರು ತಾ.ಪಂ. ಕಚೇರಿ ಅಥವಾ ತಾಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅವರನ್ನು ನೇರವಾಗಿ ಸಂಪರ್ಕಿಸಬಹುದು. ನರೇಗಾ ಯೋಜನೆಯಡಿ ಸರಕಾರದಿಂದ ಆರ್ಥಿಕ ನೆರವು ಪಡೆದುಕೊಂಡು ಈ ಕೂಡಲೇ ಮಳೆಕೊಯ್ಲು ವ್ಯವಸ್ಥೆಯನ್ನು ನಿಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಜಿ.ಪಂ. ವತಿಯಿಂದ ಎಲ್ಲ ರೀತಿಯ ಮಾರ್ಗದರ್ಶನ ಲಭಿಸುತ್ತದೆ. ಮಳೆಕೊಯ್ಲು ವ್ಯವಸ್ಥೆ ಮಾಡಿಕೊಡುವವರ ಕುರಿತ ಮಾಹಿತಿಗೂ ಆಯಾ ಗ್ರಾ.ಪಂ.ಗಳ ಪಿಡಿಒಗಳನ್ನು ಕೂಡ ಸಂಪರ್ಕಿಸಬಹುದು. ಗ್ರಾಮೀಣ ಭಾಗದ ಜನತೆ ಸರಕಾರದ ಆರ್ಥಿಕ ನೆರವು ಪಡೆದು ಮಳೆಗಾಲಕ್ಕೆ ಸಂದಭೋìಚಿತವಾಗಿ ಶೀಘ್ರ ಮಳೆಕೊಯ್ಲು ಅಳವಡಿಸಿಕೊಳ್ಳುವತ್ತ ಮನಸ್ಸು ಮಾಡಬೇಕು. ಆ ಮೂಲಕ, ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಆಶಯ ಸಾಕಾರಗೊಳಿ ಸಬೇಕು. ಜೂ. 19: ಮಳೆಕೊಯ್ಲು ಮಾಹಿತಿ ಕಾರ್ಯಾಗಾರ
“ಉದಯವಾಣಿ’ಯು ಮಳೆಕೊಯ್ಲು ಅಭಿಯಾನ ಪ್ರಾರಂಭಿಸಿದ ಬಳಿಕ ಮಂಗಳೂರಿನಲ್ಲಿ ನಗರವಾಸಿಗಳು ಈ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಆದರೆ, ಜನರಿಗೆ ಮಳೆಕೊಯ್ಲು ಅಳವಡಿಕೆ ಬಗ್ಗೆ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಜೂ. 19ರಂದು ಮಂಗಳೂರಿನ ಉರ್ವಸ್ಟೋರ್ ಬಳಿಯಿರುವ ದ.ಕ. ಜಿ.ಪಂ. ಸಭಾಂಗಣದಲ್ಲಿ “ಮಳೆಕೊಯ್ಲು ಮಾಹಿತಿ ಕಾರ್ಯಾಗಾರ’ ಏರ್ಪಡಿಸಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಖ್ಯಾತ ಮಳೆಕೊಯ್ಲು ತಜ್ಞ ಶ್ರೀ ಪಡ್ರೆ ಅವರು ಸಮಗ್ರ ಮಾಹಿತಿ ನೀಡಲಿದ್ದಾರೆ. ಮಳೆ ಕೊಯ್ಲು ಯಶೋಗಾಥೆ
ನೀರಿನ ಸಮಸ್ಯೆಗೆ
ಪರಿಹಾರ ಮಳೆಕೊಯ್ಲು
ನೀರಿನ ಸಮಸ್ಯೆಗೆ ಪರಿಹಾರೋಪಾಯವಾಗಿ ಸುರತ್ಕಲ್ ಸಿಟಿ ರಿಯಲ್‌ಎಸ್ಟೇಟ್ ಬಿಲ್ಡರ್ ಆ್ಯಂಡ್ ಡೆವಲಪರ್ ಸಂಸ್ಥೆಯು ಮಳೆಕೊಯ್ಲು ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ.
ಇಲ್ಲಿ ಸುಮಾರು 25 ಸಾವಿರ ರೂ. ವೆಚ್ಚದಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಬಾವಿಯ ಸುತ್ತಲೂ ಆರು ಅಡಿ ಗುಂಡಿ ತೋಡಿ ಛಾವಣಿಯ ನೀರನ್ನು ಪೈಪ್‌ಗ್ಳ ಮೂಲಕ ಕೆಳಕ್ಕೆ ತಂದು ಫಿಲ್ಟರ್ ವ್ಯವಸ್ಥೆಗೆ ಬೇಕಾದ ಕಾರ್ಬನ್, ಜಲ್ಲಿ ಸಹಿತ ಬೇಕಾದ ವಸ್ತುಗಳನ್ನು ಹಾಕಿ ಶುದ್ಧೀಕರಣ ಮಾಡಿ ಬಾವಿಗೆ ಬಿಡಲಾಗುತ್ತಿದೆ. ಪ್ರಥಮ ಮಳೆಗೆ ಆಳದಲ್ಲಿದ್ದ ನೀರು ಎರಡು ರಿಂಗ್‌ನಷ್ಟು ಮೇಲಕ್ಕೆ ಬಂದಿದೆ. ಸಿಟಿ ಗಾರ್ಡನ್‌ನಲ್ಲಿ ಬೋರ್‌ವೆಲ್‌ಗೆ ಸಾಂಪ್ರದಾಯಿಕ ಮಾದರಿಯಲ್ಲಿ ಜಲಮರುಪೂರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಸಂಸ್ಥೆಯ ಪಾಲುದಾರರಾದ ವೈ. ರವೀಂದ್ರ ರಾವ್, ಶ್ರೀಕಾಂತ ಕಾಮತ್ ಅವರ ಮುತುವರ್ಜಿಯಿಂದ ವ್ಯವಸ್ಥೆ ಅಳವಡಿಸಲಾಗಿದೆ. ವೈ. ರವೀಂದ್ರ ರಾವ್ ಅವರು ಸ್ವತಃ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಈಗಿಂದಲೇ ಜನ ಕಾರ್ಯೋನ್ಮುಖರಾಗಬೇಕಿದೆ ಎನ್ನುತ್ತಾರೆ ವೈ. ರವೀಂದ್ರ ರಾವ್. ಕೊಳವೆ ಬಾವಿಗೆ ಜಲಮರುಪೂರಣ
ಎರಡು ವರ್ಷಗಳ ಹಿಂದೆ ಮಣ್ಣಗುಡ್ಡೆಯ ಪ್ರೇಮ್‌ಸಾಗರ್ ಅಪಾರ್ಟ್‌ಮೆಂಟ್‌ನ ಕೊಳವೆ ಬಾವಿಯಿಂದ ನಸುಹಳದಿ ಬಣ್ಣದ ನೀರು ಬರಲು ಪ್ರಾರಂಭವಾಗಿತ್ತು. ಅಂತರ್ಜಲ ಬರಿದಾಗುತ್ತಿರುವ ಮುನ್ಸೂಚನೆ ದೊರೆತ ತತ್‌ಕ್ಷಣವೇ ವಸತಿ ಸಮುಚ್ಚಯದ ಎಲ್ಲರೂ ಈ ಬಗ್ಗೆ ಚರ್ಚಿಸಿದರು. ಬಳಿಕ ಮಳೆ ನೀರು ಕೊಯ್ಲು , ಜಲಮರುಪೂರಣ ಬಗ್ಗೆ ಮಾಹಿತಿ ಪಡೆದು ಕಾರ್ಯ ರೂಪಿಸಿದೆವು ಎಂದು ಹೇಳುತ್ತಾರೆ ಸಮುಚ್ಚಯದ ಸುಖಲಾಕ್ಷ್ಮಿ ವೈ ಸುವರ್ಣ. ಈ ವಸತಿ ಸಮುಚ್ಚಯದಲ್ಲಿ 42 ಫ್ಲಾಟ್‌ಗಳಿದ್ದು, ತಾರಸಿನಿಂದ ರಭಸದಿಂದ ಹರಿದು ಬರುವ ಮಳೆ ನೀರಿಗೆ ಅಗಲವಾದ ಪೈಪ್, ಮೂರು ಫಿಲ್ಟರ್ ಅಳವಡಿಸಿ ಎರಡು ಭಾಗ ಮಾಡಿ ಒಂದು ಭಾಗ ಕೊಳವೆ ಬಾವಿಗೆ, ಇನ್ನೊಂದು ಭಾಗ ನೀರಿನ ಟ್ಯಾಂಕಿಗೆ ನೀಡಿ ಸಂಪರ್ಕ ಕಲ್ಪಿಸಲಾಯಿತು. ಆ ಬಳಿಕ ನಮ್ಮ ಸಮುಚ್ಚಯಕ್ಕೆ ಈವರೆಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಇದ ರಿಂದಾಗಿ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ಕೃತಕ ನೆರೆ ಸಮಸ್ಯೆಯೂ ಬಗೆಹರಿದಿದೆ. ಪ್ರತಿ ಮನೆಯಲ್ಲೂ ಮಳೆಕೊಯ್ಲು ವ್ಯವಸ್ಥೆ ಮಾಡಿದರೆ ಮುಂದೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಅವರು. ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆ ವಾಟ್ಸಪ್ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು. ಮಾಹಿತಿ ಕೊರತೆ
ನರೇಗಾ ಯೋಜನೆಯಡಿ ಮಳೆಕೊಯ್ಲು, ಜಲ ಮರುಪೂರಣ ವ್ಯವಸ್ಥೆ ಅಳವಡಿಸಿಕೊಳ್ಳಲು ಸಾರ್ವಜನಿಕರಿಗೆ ಹಣಕಾಸು ಸೌಲಭ್ಯ ನೀಡಲಾಗುತ್ತಿದೆ. ಆದರೆ, ಜನತೆ ಮಾಹಿತಿ ಕೊರತೆಯಿಂದಾಗಿ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜನ ಈ ವ್ಯವಸ್ಥೆಯನ್ನು ಮನೆಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು. ಭವಿಷ್ಯದಲ್ಲಿ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಇದೊಂದೇ ಪರಿಹಾರೋಪಾಯ. ಮಂಗಳೂರು ಪಂ. ವ್ಯಾಪ್ತಿಯಡಿ ಬರುವ 55 ಗ್ರಾ.ಪಂ. ವ್ಯಾಪ್ತಿಯಲ್ಲೂ ಮಳೆಕೊಯ್ಲು ಅನುಷ್ಠಾನಕ್ಕೆ ಸಲಹೆ ಮಾಡಲಾಗುತ್ತಿದೆ; ಮುಂದೆಯೂ ಮಾಡಲಾಗುವುದು.
- ರಘು ಆಲನಹಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಮಂಗಳೂರು ತಾ.ಪಂ. - ಧನ್ಯಾ ಬಾಳೆಕಜೆ