ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ 35 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 81ಕ್ಕೇರಿದೆ. ಸೋಂಕಿತರಾದ ಪಿ.3313, ಪಿ.6135 ಮತು ಪಿ-6136, ಅವರಲ್ಲಿ ಸೋಂಕು ಗುಣಮುಖರಾಗಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಜಿಲ್ಲಾಡಳಿತ ನೀಡಿದ ಫಲಿತಾಂಶ ದ ವಿವರದಲ್ಲಿ ಕನಕಪುರದಲ್ಲಿ 23, ಮಾಗಡಿ ಯಲ್ಲಿ 04, ರಾಮನಗರದಲ್ಲಿ 04 ಮತ್ತು ಚನ್ನ ಪಟ್ಟಣದಲ್ಲಿ 2 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಪಟ್ಟಣದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಅವರು ಬೆಂಗಳೂರಿನ ಗೋರಿಪಾಳ್ಯ ನಿವಾಸಿ ಎನ್ನಲಾಗಿದೆ. ಹೆರಿಗೆಗೆಂದು ಅವರು ಚನ್ನಪಟ್ಟಣ ನಗರಕ್ಕೆ ಬಂದಿದ್ದರು. ರಾಮನಗರ ತಾ.ಬಿಡದಿಯಲ್ಲಿ ಬಿಎಂಟಿಸಿ ಚಾಲಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆ ಯಲ್ಲಿ ಇಲ್ಲಿಯವರೆಗೆ ಒಟ್ಟು 6 ಮಂದಿ ಸೋಂಕಿತ ರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಾಲ್ಕು ಮಂದಿಗೆ ಕೋವಿಡ್ 19 ಸೋಂಕು: ಮಾಗಡಿ ಪಟ್ಟಣದಲ್ಲಿ ಮತ್ತೆ 4 ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರನ್ನು ರಾಮನಗರ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಅದೇ ಕುಟುಂಬದ ಇನ್ನಿಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪಟ್ಟಣದ 9ನೇ ವಾರ್ಡ್ ಐಡಿಎಸ್‌ಎಂಟಿ ಬಡಾವಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ತಿರುಮಲೆ 4ನೇ ವಾರ್ಡ್ ಒಂದೇ ಕುಟುಂಬದ ನಾಲ್ವರನ್ನು ಹುಲಿಕಟ್ಟೆ ಕೇಂದ್ರದಲ್ಲಿ ಕ್ವಾರಂಟೈನ್‌ಗೊಳಿಸಲಾಗಿದೆ.
ಅದರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ವೈದ್ಯರು ಇನ್ನಿಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಶುಕ್ರವಾರ 4 ಮಂದಿ ರಾಮನಗರ ಕೋವಿಡ್ ಆಸ್ಪತ್ರೆಗೆ ದಾಳಿಸಲಾಗಿದೆ. ತಾಲೂಕಿನಲ್ಲಿ ಒಟ್ಟಾರೆ 15 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದಿದೆ.ಪಟ್ಟಣ ಮತ್ತು ತಿರುಮಲೆಯಲ್ಲಿ ಕೋವಿಡ್ 19 ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕನಕಪುರದಲ್ಲಿ ಕೋವಿಡ್ 19 ಆರ್ಭಟ: ತಾಲೂಕಿನಲ್ಲಿ ಕೋವಿಡ್ 19 ಆರ್ಭಟ ಮುಂದುವರಿದಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ 23 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದು ಶುಕ್ರವಾರ ವರದಿಯಾಗಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.ತಾಲೂಕಿನಲ್ಲಿ ಕೋವಿಡ್ 19ಗೆ ಬಲಿಯಾದ 80ರ ವೃದ್ಧನ ಸಂಪರ್ಕದಲ್ಲಿದ್ದ ಅವರು ಕುಟುಂಬದ 4 ಮಂದಿ ಮತ್ತು ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ 2 ಸೇರಿ ಒಟ್ಟು ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಸೋಂಕು ಹರಡಿದೆ.
ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನವೋದಯ ಆರೋಗ್ಯ ಕೇಂದ್ರದ ಸೋಂಕಿತ ವೈದ್ಯ ದಂಪತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ ಸೇರಿದಂತೆ ಸ್ತ್ರೀರೋಗ ತಜ್ಞೆ ರಶ್ಮಿ ಟೆಂಕರ್ ಚಿಕಿತ್ಸೆ ನೀಡಿದ್ದ ಇಬ್ಬರು ಗರ್ಭಿಣಿಯರಿಗೂ ಸೇರಿದಂತೆ ಕ್ವಾರಂಟೈನಲ್ಲಿದ್ದ ಒಟ್ಟು 13 ಮಂದಿಗೆ ಮತ್ತು ಕೋಟೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ ಪತ್ನಿ ಮತ್ತು ಮಗಳು ಸೇರಿದಂತೆ ಸೋಂಕಿತನ ಒಬ್ಬ ಸ್ನೇಹಿತನಿಗೂ ಸೋಂಕು ಕಾಣಿಸಿಕೊಂಡಿದ್ದು, ಶುಕ್ರವಾರ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 23 ಮಂದಿಗೆ ಸೋಂಕು ತಗುಲಿದೆ. ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದವರು ಎಂಬುದು ಸಮಾಧಾನಕರವಾಗಿದೆ.