ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗುರುವಾರ 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಮ್ ಖಾತೆಗಳು, ಎರಡು ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್ ಖಾತೆಯನ್ನು ನಿರ್ಬಂಧಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಅವರು ಶುಕ್ರವಾರ ಹೇಳಿದ್ದಾರೆ.
ಎಲ್ಲಾ ಖಾತೆಗಳಲ್ಲಿ ಸಾಮಾನ್ಯ ಅಂಶವೆಂದರೆ, ಪಾಕಿಸ್ಥಾನದಿಂದ ಕಾರ್ಯನಿರ್ವಹಿಸುತ್ತಿದ್ದು, ನಕಲಿ ಭಾರತ ವಿರೋಧಿ ಸುದ್ದಿ ಮತ್ತು ಇತರ ದೇಶ ವಿರೋಧಿ ವಿಷಯಗಳನ್ನು ಹರಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಸಚಿವಾಲಯವು ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಟೆಲಿಕಾಂ ಇಲಾಖೆಯ ಮೂಲಕ ಆಯಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶಗಳನ್ನು ನೀಡಿದೆ.
“ಬ್ಲಾಕ್ ಮಾಡಲಾದ ಖಾತೆಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಕಾಶ್ಮೀರ, ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧ ಮತ್ತು ಮಾಜಿ ಸಿಡಿಎಸ್ ಬಿಪಿನ್ ರಾವತ್ ಅವರ ಸಾವಿನ ವಿಷಯಗಳ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
“ಬ್ಲಾಕ್ ಮಾಡಲಾದ ಸಾಮಾಜಿಕ ಮಾಧ್ಯಮ ಖಾತೆಗಳು 130 ಕೋಟಿ ವೀಕ್ಷಕರನ್ನು ಹೊಂದಿರುವ 1.2 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದವು. 35 ಖಾತೆಗಳು ಪಾಕಿಸ್ಥಾನದಿಂದ ಕಾರ್ಯನಿರ್ವಹಿಸುತ್ತಿದ್ದವು ಮತ್ತು ನಾಲ್ಕು ಸಂಘಟಿತ ತಪ್ಪು ಮಾಹಿತಿ ನೆಟ್‌ವರ್ಕ್‌ಗಳ ಭಾಗವೆಂದು ಗುರುತಿಸಲಾಗಿದೆ” ಎಂದು ವಿಕ್ರಮ್ ಸಹಾಯ್ ಹೇಳಿದ್ದಾರೆ.
ಈ ನಿರ್ಬಂಧಿತ ಖಾತೆಗಳಲ್ಲಿ 14 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುವ ‘ಅಪ್ನಿ ದುನಿಯಾ ನೆಟ್‌ವರ್ಕ್’ ಮತ್ತು 13 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿರುವ ‘ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್’ ಸೇರಿವೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಕಟಣೆ ತಿಳಿಸಿದೆ.
ನಿರ್ಬಂಧಿಸಲಾದ ಖಾತೆಗಳಲ್ಲಿನ ವಿಷಯಗಳು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ಹೊರಡಿಸಲಾದ ಐದು ಪ್ರತ್ಯೇಕ ಆದೇಶಗಳನ್ನು ಉಲ್ಲಂಘಿಸಲಾಗಿದೆ.