ಜಮ್ಮು: ಜಮ್ಮು-ಕಾಶ್ಮೀರದ ಕಿಶ್ವ್ತಾರ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಬಸ್‌ವೊಂದು ಸ್ಕಿಡ್ ಆಗಿ ಆಳದ ಕಮರಿಗೆ ಬಿದ್ದ ಕಾರಣ 35 ಮಂದಿ ಮೃತಪಟ್ಟು, 17ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ.
28 ಆಸನಗಳಿದ್ದ ಮಿನಿ ಬಸ್‌ನಲ್ಲಿ ಒಟ್ಟು 52 ಪ್ರಯಾಣಿಕರನ್ನು ತುಂಬಿಸಲಾಗಿತ್ತು. ಈ ಬಸ್ ಕೇಶ್ವಾನ್‌ನಿಂದ ಕಿಶ್ತ್ವಾರ್‌ಗೆ ತೆರಳುತ್ತಿತ್ತು. ಬೆಳಗ್ಗೆ 7.30ರ ವೇಳೆಗೆ ಕೇಶ್ವಾನ್- ಥಕ್ರಾಯಿ ರಸ್ತೆಯಲ್ಲಿ ಸಾಗುತ್ತಿದ್ದಂತೆ, ಏಕಾಏಕಿ ಬಸ್ ಸ್ಕಿಡ್ ಆಗಿ, ಕಮರಿಯೊಂದಕ್ಕೆ ಉರುಳಿತು. ಘಟನೆಯಲ್ಲಿ 35 ಮಂದಿ ಸಾವಿಗೀಡಾದರೆ, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು, ಭದ್ರತಾ ಪಡೆಗಳು ಹಾಗೂ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾದ ಕಾರಣ ಹಲವರ ಜೀವ ಉಳಿದಿದೆ. ಕೆಲವರನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲ ಸತ್ಯಪಾಲ್ ಮಲಿಕ್ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನೂ ರಾಜ್ಯಪಾಲರು ಘೋಷಿಸಿದ್ದಾರೆ.