ಉಡುಪಿ: ಒಂದೇ ವೇದಿಕೆಯಲ್ಲಿ 25 ಯುವ ಯಕ್ಷಾವತಾರಿಗಳನ್ನು ಕಂಡು ಭಾವ ಪರವಶ ನಾದೆ ಎಂದು ಹಿರಿಯ ಭಾಗವತ ಎಂ. ದಿನೇಶ್ ಅಮ್ಮಣ್ಣಾಯ ಹೇಳಿದರು.
ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ಗುರುವಾರ ಜರಗಿದ ಸುಧಾಕರ ಆಚಾರ್ಯರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಯಲ್ಲಿ ನಿರಂತರ 25 ವರ್ಷ ಭಾಗವತಿಕೆ ನಡೆಸಿಕೊಟ್ಟ ಅವರು ರಜತ ಗೌರವ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ದೇವರ ಆಶೀರ್ವಾದ, ಕಲಾಭಿಮಾನಿಗಳ ಅಭಿಮಾನವೇ ಕಾರಣ. ಕಲಾ ಸರಸ್ವತಿಯನ್ನು ಆರಾಧಿಸುವುದು ನನ್ನ ಕರ್ತವ್ಯ ಎನ್ನುವ ನೆಲೆಯಲ್ಲಿ ನಿವೃತ್ತನಾದರೂ ಹಾಡುತ್ತಿದ್ದೇನೆ ಎಂದರು.
ಭಾರತೀಯ ಸಂಸ್ಕೃತಿ ಬಗ್ಗೆ ಇರುವ ಕಾಳಜಿ ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ಅಭೂತಪೂರ್ವ. ಸ್ವರ ಮಾಧುìಯಕ್ಕೆ ರಾಗ ಸಂಯೋಜನೆಯೊಂದಿಗೆ ಲಯಬದ್ಧವಾಗಿ ಹಾಡಬಲ್ಲ ಮೇರು ಕಲಾವಿದ ಅಮ್ಮಣ್ಣಾಯರಲ್ಲಿರುವ ಕಲಾ ಪ್ರೌಢಿಮೆಯನ್ನು ಯುವ ಕಲಾವಿದರು ಅನುಸರಿಸಿ ಬೆಳೆಸಿದರೆ ಯಕ್ಷಗಾನ ಕಲೆ ಬೆಳಗಲಿದೆ ಎಂದು ಕಲಾ ವಿಮರ್ಶಕಿ ಪ್ರತಿಭಾ ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿದರು.
ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ ಶುಭಾಶಂಸನೆಗೈದರು. ಅತಿಥಿಗಳಾಗಿ ಡಾ| ಸಾಯಿ ಗಣೇಶ್ ಶೆಟ್ಟಿ, ಡಾ| ಭವ್ಯಶ್ರೀ ಕಿದಿಯೂರು, ಡಾ| ಅಭಿನ್ ದೇವದಾಸ್ ಶ್ರೀಯಾನ್, ಸಮೃದ್ಧ್ ಪ್ರಕಾಶ್, ಕನಿಷ್R ಕಿಶನ್ ಹೆಗ್ಡೆ, ಸುಧಾ ದಿನೇಶ್ ಅಮ್ಮಣ್ಣಾಯ, ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ, ಆಚಾರ್ಯ ಯಾಸ್ಕಾ, ಮೇದಿನಿ ಆಚಾರ್ಯ ಉಪಸ್ಥಿತರಿದ್ದರು.
ಪ್ರೊ| ಪವನ್ ಕಿರಣಕೆರೆ ಪ್ರಸ್ತಾವನೆಗೈದು, ಸುಧೀಂದ್ರ ಹಂದೆ ನಿರೂಪಿಸಿದರು. ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ವೈಕುಂಠ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ನಾದವೈಭವದ ಅನಾವರಣ
ಪ್ರೊ| ಪವನ್ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ-ಹವ್ಯಾಸಿ ವಲಯದ 6ನೇ ತರಗತಿಯ ವಿದ್ಯಾರ್ಥಿಗಳು, ಎಂಜಿನಿಯರ್, ವೈದ್ಯರನ್ನು ಒಳಗೊಂಡ 6 ತೆಂಕು, 6 ಬಡಗು, 6 ಮಹಿಳಾ ಭಾಗವತರೊಂದಿಗೆ 7 ಚೆಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಕ್ಷಾವತಾರಿಗಳ ಸಾಂಗತ್ಯದಲ್ಲಿ “ನಾದ ವೈಕುಂಠ’ ನೆರವೇರಿತು.