ಧಾರವಾಡ: ಭಾರತೀಯ ಜೀವ ವಿಮಾ ನಿಗಮದ ಧಾರವಾಡ ವಿಭಾಗದ ವತಿಯಿಂದ 2019-20ರಲ್ಲಿ 345 ಕೋಟಿ ಒಟ್ಟು ಪ್ರೀಮಿಯಂ ಗುರಿ ಹೊಂದಲಾಗಿದೆ ಎಂದು ಹಿರಿಯ ವಿಭಾಗಾಧಿಕಾರಿ ಹೆಚ್.ಕೆ.ರವಿಕಿರಣ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 2,11,000 ಪಾಲಸಿ ಗುರಿ ಇದೆ. ಸದ್ಯ ಈವರೆಗೆ ನಮ್ಮ ಸಾಧನೆ ಅನ್ವಯ ಇಲ್ಲಿಯವರೆಗೆ 48,666 ಪಾಲಿಸಿ ಹೊಂದಿದ್ದು, 121.34 ಕೋಟಿ ಪ್ರೀಮಿಯಂ ಆಗಿದೆ. ಕಳೆದ 2018-19 ನೇ ಸಾಲಿನಲ್ಲಿ ಒಟ್ಟು 1,76,021 ಪಾಲಿಕೆ ಮಾರಾಟ ಆಗಿದ್ದು, 255.99 ಕೋಟಿ ಮೊದಲ ಪ್ರೀಮಿಯಂ ಸಂಗ್ರಹಣೆ ಆಗಿದೆ. ಸಂಗ್ರಹಣೆಯಾದ ಒಟ್ಟು ಆದಾಯ 1677.06 ಕೋಟಿಯಷ್ಟಿದ್ದು, ಸಂಗ್ರಹಣೆಯಾದ ಒಟ್ಟು ಪ್ರೀಮಿಯಂ ಆದಾಯ 1570.11 ಕೋಟಿ ಇದೆ ಎಂದರು.
ಮ್ಯಾಚ್ಯುರಿಟಿ ಬೆನಿಫಿಟ್ ಪಾಲಸಿಗಳ ಸಂಖ್ಯೆ 92,624 ಇದ್ದು, 655.79 ಕೋಟಿ ಸಂದಾಯವಾದ ಹಣವಾಗಿದೆ. 188.96 ಕೋಟಿಯ 88,437 ಸರ್ವೈವಲ್ ಬೆನಿಫಿಟ್ ಪಾಲಿಸಿಗಳಿದ್ದು,7933 ಡೆತ್ ಕ್ಲೇಮ್ ಪಾಲಿಸಿಗಳ ಸಂಖ್ಯೆ ಇದೆ. ಈ ಪೈಕಿ 90.86 ಕೋಟಿ ಹಣ ಸಂದಾಯವಾಗಿದೆ. 169.70 ಕೋಟಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡದ ಸರ್‌ಪ್ಲಾಸ್ ಹಣವಾಗಿದೆ ಎಂದರು.
ಧಾರವಾಡದ ಹಣಕಾಸು ಮತ್ತು ಲೆಕ್ಕ ಪತ್ರ ವಿಭಾಗದಿಂದ ಕಳೆದ ವರ್ಷದ ಆರ್ಥಿಕ ಲೆಕ್ಕ ಪತ್ರಗಳನ್ನು ಉನ್ನತ ಅಧಿಕಾರಿಗಳಿಗೆ ಸಮರ್ಪಿಸುವಲ್ಲಿ ಅಖೀಲ ಭಾರತ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಇನ್ನು ಕಳೆದ ಆರ್ಥಿಕ ವರ್ಷದಲ್ಲಿ 2 ವಿಮಾ ಗ್ರಾಮ, 8 ವಿಮಾ ಶಾಖೆಗಳನ್ನು ಘೋಷಿಸಲಾಗಿದೆ. ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆ ವ್ಯಾಪ್ತಿ ಹೊಂದಿರುವ ಧಾರವಾಡ ವಿಭಾಗದಲ್ಲಿ 15 ಶಾಖಾ ಕಚೇರಿಗಳು ಹಾಗೂ 17 ಉಪಗ್ರಹ ಸಂಪರ್ಕ ಶಾಖೆಗಳಿವೆ. ಗ್ರಾಹಕರ ಬೇಡಿಕೆ ಅನುಗುಣವಾಗಿ ಒಂದು ಪ್ರತ್ಯೇಕ ಮಾರುಕಟ್ಟೆ ವಿಭಾಗ ಹಾಗೂ ಗ್ರಾಹಕರ ವಲಯ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದೇವೆ ಎಂದರು.
1956 ಸೆ.1ರಂದು ಎಲ್ಐಸಿ ಅಸ್ತಿತ್ವಕ್ಕೆ ಬಂದಿದ್ದು, ನಿಗಮವು 63 ವರ್ಷಗಳ ಪಾಲಸಿದಾರರ ಸಾರ್ಥಕ ಸೇವೆ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಸೆ.1ರಿಂದ ಸೆ.7ರವರೆಗೆ ವಿಮಾ ಸಪ್ತಾಹ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪಾಲಸಿಗಳನ್ನು ಮಾರಾಟ ಮಾಡಲು ಹೆಚ್ಚು ಒತ್ತು ಕೊಡಲಾಗಿದ್ದು, ಕೆಲ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ. ಪ್ರತಿನಿಧಿಗಳು ನಮ್ಮ ಸಂಸ್ಥೆಯ ಜೀವನಾಡಿ ಇದ್ದಂತೆ. ಅವರ ಮಾರಾಟ ಕೌಶಲ್ಯ ವೃದ್ಧಿಗೊಳಿಸುವ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಎಲ್ಐಸಿಯು ಸಾಮಾಜಿಕ ಕ್ಷೇತ್ರದಲ್ಲಿ 2.61ಲಕ್ಷ ಕೋಟಿ, ಕೇಂದ್ರ ಸರ್ಕಾರದ ಸೆಕ್ಯೂರಿಟಿಗಳಲ್ಲಿ 10.34 ಲಕ್ಷ ಕೋಟಿ, ಗೃಹ ನಿರ್ಮಾಣ ಸಂಸ್ಥೆಗಳಲ್ಲಿ 54,285 ಕೋಟಿ, ಇಂಧನ ಮತ್ತು ವಿದ್ಯುಚ್ಛಕ್ತಿ ಕ್ಷೇತ್ರಗಳಲ್ಲಿ 1.8 ಲಕ್ಷ ಕೋಟಿ ಹೀಗೆ ನೀರಾವರಿ, ರಸ್ತೆ ಅಂತಹ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ಮೊದಲಿನಂತೆ ಗ್ರಾಹಕರು ಪ್ರೀಮಿಯಂ ಸಂದಾಯ ಮಾಡಲು ಕಚೇರಿಗೆ ಬರುವಂತಿಲ್ಲ. ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ದೇಶಾದ್ಯಂತ 6 ಸಾವಿರ ಗ್ರಾಹಕ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಹಕರ ವ್ಯಾಜ್ಯ ನಿರ್ವಹಣಾ ಸಮಿತಿಗಳಿವೆ. ಗ್ರಾಹಕ ಕುಂದುಕೊರತೆ ನಿವಾರಣೆ ಸಮಿತಿ ಇದೆ ಎಂದರು. ಸಂತೋಷ ಭಟ್, ಆರ್.ವಿ.ಮುಧೋಳ ಸೇರಿದಂತೆ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.