ಮೆಪ್ಪಾಡಿ: ಮುಂಡಕೈ-ಚುರಲ್‌ಮಲಾ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇದುವರೆಗೆ 344 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ಪತ್ತೆಯಾಗಬೇಕಿದ್ದು ಇದರಲ್ಲಿ 29 ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಅಂಕಿಅಂಶಗಳ ಪ್ರಕಾರ, 146 ಮೃತದೇಹಗಳನ್ನು ಗುರುತಿಸಲಾಗಿದೆ. ಅದರಲ್ಲಿ ಪ್ರಕ್ರಿಯೆ ಪೂರ್ಣಗೊಂಡ 105 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 96 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ( ಆಗಸ್ಟ್2)ರಂದು ನಡೆದ ಶೋಧ ಕಾರ್ಯದಲ್ಲಿ 40 ಮೃತದೇಹಗಳು ಪತ್ತೆಯಾಗಿದ್ದವು. ಇಂದು ಮುಂಡಕ್ಕೈ ಎಂಬಲ್ಲಿ ಭಾರತೀಯ ಸೇನೆ ನಿರ್ಮಿಸಿರುವ ಬೈಲಿ ಸೇತುವೆ ಮೂಲಕ ನದಿ ದಾಟುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಆರು ವಲಯಗಳಲ್ಲಿ 40 ತಂಡಗಳು ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗಿದೆ.
ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್, ಡಿಎಸ್‌ಜಿ ಮತ್ತು ಕೋಸ್ಟ್ ಗಾರ್ಡ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ವರದಿಗಳ ಪ್ರಕಾರ, ಪ್ರತಿ ತಂಡದಲ್ಲಿ ಮೂವರು ಸ್ಥಳೀಯರು ಮತ್ತು ಓರ್ವ ಅರಣ್ಯ ಇಲಾಖೆ ಸಿಬಂದಿಗಳು ಇರಲಿದ್ದಾರೆ.
ಹುಡುಕಾಟಕ್ಕಾಗಿ ಬೈಲಿ ಸೇತುವೆಯ ಮೂಲಕ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗುತ್ತದೆ. ಚಾಲಿಯಾರ್ ನದಿಯಲ್ಲಿ ಸುಮಾರು 40 ಕಿ.ಮೀ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ವಯನಾಡಿನಲ್ಲಿ 91 ಪರಿಹಾರ ಶಿಬಿರಗಳನ್ನು ತೆರಯಲಾಗಿದ್ದು ಇಲ್ಲಿ 9238 ಜನರು ವಾಸಿಸುತ್ತಿದ್ದಾರೆ. ಮೆಪ್ಪಾಡಿ ಒಂದರಲ್ಲೇ ಒಂಬತ್ತು ಶಿಬಿರಗಳಿವೆ. ಈ ಶಿಬಿರಗಳಲ್ಲಿ 2328 ಜನರು ವಾಸಿಸುತ್ತಿದ್ದಾರೆ. ಸದ್ಯ ಚುರಲ್‌ಮಲಾದಲ್ಲಿ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ.
ಇಂದು ದೆಹಲಿಯಿಂದ ಡ್ರೋನ್ ಆಧಾರಿತ ರಾಡಾರ್ ಆಗಮಿಸಲಿದ್ದು ಇದರಿಂದ ದಿಬ್ಬದಡಿ, ಕೆಸರಿನಲ್ಲಿ ಹೂತು ಹೋಗಿರುವವರ ಪತ್ತೆ ಕಾರ್ಯಾಚರಣೆ ನಡೆಯಲಿದೆ ಎನ್ನಲಾಗಿದೆ.
ಅನ್ನ ಆಹಾರವಿಲ್ಲದೆ ಅಲೆದಾಡುತ್ತಿದ್ದ ಕುಟುಂಬದ ರಕ್ಷಣೆ:
ವಯನಾಡಿನ ಅರಣ್ಯ ಪ್ರದೇಶದಲ್ಲಿ ಅನ್ನ ಆಹಾರವಿಲ್ಲದೆ ಅಲೆದಾಡುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಸೇರಿದ ತಾಯಿ ಮತ್ತು ನಾಲ್ಕು ವರ್ಷದ ಮಗನನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆಹಚ್ಚಿದೆ ಈ ವೇಳೆ ವಿಚಾರಣೆ ನಡೆಸಿದ ವೇಳೆ ನಿರ್ಜನ ಗುಹೆಯಲ್ಲಿ ಇನ್ನೂ ಮೂವರು ಮಕ್ಕಳು ಸೇರಿ ನಾಲ್ಕು ಮಂದಿ ಇರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಗುಹೆಯಿಂದ ನಾಲ್ವರನ್ನು ರಕ್ಷಣೆ ಮಾಡಿ ಅವರಿಗೆ ಬೇಕಾದ ಆಹಾರ, ಬಟ್ಟೆ, ಅಗತ್ಯ ವಸ್ತುಗಳನ್ನು ನೀಡಿ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಯಿತು ಎಂದು ಕಲ್ಪೆಟ್ಟಾ ವಲಯ ಅರಣ್ಯಾಧಿಕಾರಿ ಕೆ.ಹಶಿಸ್ ಮಾಹಿತಿ ನೀಡಿದ್ದಾರೆ.
ಶ್ವಾನದಳದದಿಂದ ಕಾರ್ಯಾಚರಣೆ:
ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ವಾನದಳದ ಪಾತ್ರ ನಿರ್ಣಾಯಕವಾಗಿದೆ. ಆರಂಭದಿಂದಲೂ, ಶ್ವಾನದಳವು ಸೂಚಿಸಿದ ಪ್ರದೇಶದಾದ್ಯಂತ ಮೃತದೇಹಗಳು ಪತ್ತೆಯಾಗುತ್ತಿದ್ದು. 15ಕ್ಕೂ ಹೆಚ್ಚು ಕಡೆಗಳಲ್ಲಿ ಶ್ವಾನಗಳಿಂದ ತಪಾಸಣೆ ನಡೆಯುತ್ತಿದೆ.
ಶುಕ್ರವಾರ ಸೂಚಿಪಾರ ಜಲಪಾತದ ಬಳಿ ಆದಿವಾಸಿ ಕುಟುಂಬವೊಂದು ಪತ್ತೆಯಾಗಿದ್ದು ಅವರನ್ನು ರಕ್ಷಿಸಲಾಗಿದೆ. ಚುರಲ್‌ಮಲಾ ಪ್ರದೇಶದಲ್ಲೂ ಒಂದು ಕುಟುಂಬ ಪತ್ತೆಯಾಗಿದ್ದು ಅವರನ್ನೂ ರಕ್ಷಣಾ ತಂಡ ಪತ್ತೆ ಹಚ್ಚಿ ರಕ್ಷಣೆ ಮಾಡಿದೆ. ಈ ಪ್ರದೇಶವು ಸಂಪೂರ್ಣವಾಗಿ ಪರ್ವತಗಳಿಂದ ಆವೃತವಾಗಿದೆ. ಮಲೆನಾಡಿನ ಪ್ರವಾಹದಲ್ಲಿ ಕೊಚ್ಚಿಹೋಗಿ ಎಲ್ಲೋ ತಂಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.
ಮೋಹನ್‌ಲಾಲ್ ಭೇಟಿ:
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಇಂದು (ಶನಿವಾರ) ವಯನಾಡ್ ತಲುಪಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಅವರು ಸೇನಾ ಶಿಬಿರವನ್ನು ತಲುಪಿ ರಕ್ಷಣಾ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಕುರಿತು ಚರ್ಚೆ ನಡೆಸಲಿದ್ದಾರೆ.