ಲಕ್ನೋ: ಉತ್ತರಪ್ರದೇಶದ ಸೋನ್ ಫಾಡಿ ಮತ್ತು ಹಾರ್ಡಿ ಪ್ರದೇಶದಲ್ಲಿ ಸುಮಾರು 3350 ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಉತ್ತರಪ್ರದೇಶದ ಭೂವಿಜ್ಞಾನ ಮತ್ತು ಗಣಿ ನಿರ್ದೇಶನಾಲಯ ತಿಳಿಸಿದೆ.
ಸೋನ್ ಭದ್ರಾ ಜಿಲ್ಲೆಯ ಸೋನ್ ಫಾಡಿ ಪ್ರದೇಶದಲ್ಲಿ ಅಂದಾಜು 2,700 ಟನ್ ಗಳಷ್ಟು ಹಾಗೂ ಹಾರ್ಡಿ ಪ್ರದೇಶದಲ್ಲಿ 650 ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಈ ಕುರಿತು ಜಿಲ್ಲಾ ಗಣಿ ಇಲಾಖಾ ಅಧಿಕಾರಿ ಕೆಕೆ ರಾಯ್ ಮಾತನಾಡಿ, ರಾಜ್ಯ ಗಣಿ ಇಲಾಖೆ ರಚಿಸಿದ ಏಳು ಜನರ ತಂಡ ಗುರುವಾರ ಸೋನ್ ಭದ್ರಾ ಪ್ರದೇಶಕ್ಕೆ ಭೇಟಿ ನೀಡಿತ್ತು. ಚಿನ್ನದ ಗಣಿಗಾರಿಕೆ ಮಾಡುವ ಪ್ರದೇಶವನ್ನು ತಂಡ ಮ್ಯಾಪ್ ಮಾಡಿದ್ದು, ಚಿನ್ನ ನಿಕ್ಷೇಪ ಸ್ಥಳವನ್ನು ಜಿಯೋ ಟ್ಯಾಗಿಂಗ್ (ಸ್ಥಳ ಗುರುತಿಸುವಿಕೆ) ಮಾಡಿರುವುದಾಗಿ ವಿವರಿಸಿದರು.
ಖನಿಜ ಶ್ರೀಮಂತಿಕೆಯ ಸೋನ್ ಭದ್ರಾ ಪ್ರದೇಶದಲ್ಲಿ ಸುಲಭವಾಗಿ ಚಿನ್ನದ ಗಣಿಗಾರಿಕೆ ಮಾಡಬಹುದಾಗಿದೆ ಎಂದು ಹೇಳಿದರು. ಗಣಿಗಾರಿಕೆಯನ್ನು ಗುಡ್ಡಪ್ರದೇಶವನ್ನು ಸುತ್ತುವರಿದಿದೆ. ಈ ಬಗ್ಗೆ ಸರ್ಕಾರ ಕೂಡಲೇ ಏಲಂ ಪ್ರಕ್ರಿಯೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನ ಹೊರತುಪಡಿಸಿ ಇಲ್ಲಿ ಅಪರೂಪದ ಯುರೇನಿಯಂ ಇದ್ದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶದ ಬುಂದೇಲ್ ಖಾಂಡ್ ಮತ್ತು ವಿಂಧ್ಯಾನ್ ಜಿಲ್ಲೆಯಲ್ಲಿ ಚಿನ್ನ, ವಜ್ರ, ಪ್ಲ್ಯಾಟಿನಂ, ಸುಣ್ಣದ ಕಲ್ಲು, ಗ್ರೆನೈಟ್, ಫಾಸ್ಫೇಟ್ ಖನಿಜ ಹೊಂದಿರುವುದಾಗಿ ಹೇಳಿದೆ.