Advertisement
ಸಮಿತಿಯು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದೆ. ಬಿಬಿಎಂಪಿ, ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನಡೆಸಲು ಆಯೋಗದ ವರದಿ ನಿರ್ಣಾಯಕವಾಗಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾಕರನ್ನು ಒಳಗೊಂಡಂತೆ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. 44.40ರಷ್ಟಿದೆ. ಈ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದ್ದರೂ ಸಾಮಾಜಿಕ ಮತ್ತು ರಾಜಕೀಯವಾಗಿ ಅವು ಹಿಂದುಳಿದಿವೆ. ಮುಸ್ಲಿಮರ ಸಹಿತ ಇತರ ಹಿಂದುಳಿದ ವರ್ಗಗಳಿಗೆ ಕರ್ನಾಟಕದಲ್ಲಿ ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಬಹುದು.
Related Articles
Advertisement
ಮೇಯರ್ ಅವಧಿ 30 ತಿಂಗಳುಗಳಿಗೆ ಹೆಚ್ಚಿಸಿ :
ಹೊಸ ಬಿಬಿಎಂಪಿ ಕಾಯ್ದೆಯ ಪ್ರಕಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಪರಿಗಣಿಸಬೇಕು. ಅಲ್ಲದೆ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್ 10ಕ್ಕೆ ತಿದ್ದುಪಡಿ ತಂದು ಬಿಬಿಎಂಪಿಯಲ್ಲಿ 30 ತಿಂಗಳುಗಳಿಗೆ ಅವಕಾಶ ಕಲ್ಪಿಸಿದಂತೆ ಇತರ ನಗರ ಸ್ಥಳೀಯ ಸಂಸ್ಥೆಗಳ ಮೇಯರ್ ಮತ್ತು ಉಪ ಮೇಯರ್‌ಗಳ ಅವಧಿಯನ್ನೂ 30 ತಿಂಗಳುಗಳಿಗೆ ನಿಗದಿ ಪಡಿಸಬೇಕು ಎಂದು ಸಲಹೆ ನೀಡಿದೆ.
ಅಲ್ಲದೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಚುನಾವಣ ವಿಭಾಗದ ವ್ಯಾಪ್ತಿಗೆ ತರುವಂತೆ ಶಿಫಾರಸು ಮಾಡಲಾಗಿದೆ.
2027 ಅಥವಾ 2028ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಸರಕಾರವು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮರು ಪರಿಶೀಲನೆ ಮಾಡುವಂತೆ ಆಯೋಗವು ಸಲಹೆ ನೀಡಿದೆ.
ಸಂಪುಟದಲ್ಲಿ ಚರ್ಚೆ ಸಾಧ್ಯತೆ :
ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನ್ಯಾ| ಭಕ್ತವತ್ಸಲ ಸಮಿತಿಯ ವರದಿ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ವರದಿ ಸಲ್ಲಿಕೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿ, ವರದಿಯು ಸರಕಾರದ ಪರಿಶೀಲನೆಯಲ್ಲಿದೆ ಎಂದು ಅರಿಕೆ ಮಾಡಿಕೊಳ್ಳುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಇನ್ನಷ್ಟು ಸಮಯ ಕೇಳುವ ಸಾಧ್ಯತೆಯೂ ಇದೆ.
ಶಿಫಾರಸುಗಳೇನು? :
1.ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇತರ ಒಬಿಸಿಗೆ ಶೇ. 33 ಪ್ರಾತಿನಿಧ್ಯ ನೀಡಿ
2.ಬಿಬಿಎಂಪಿಯಲ್ಲಿ ಮೀಸಲಾತಿ ನೀಡುವಾಗ ಒಬಿಸಿಯವರನ್ನೂ ಗಮನಿಸಿ
3.ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಆಡಳಿತ ಮತ್ತು ಸುಧಾರಣ ಇಲಾಖೆ ವ್ಯಾಪ್ತಿಗೆ ತನ್ನಿ
4.ಮೇಯರ್, ಉಪಮೇಯರ್ ಅವಧಿ ಬದ ಲಾವಣೆಗಾಗಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತನ್ನಿ
ಪುನರ್ ವಿಂಗಡಣೆ ವರದಿ ಮತ್ತು ನ್ಯಾ| ಭಕ್ತವತ್ಸಲ ಸಮಿತಿ ವರದಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗುತ್ತದೆ. ಅಲ್ಲಿನ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. –ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ