ಮುಂಬಯಿ: ರಾಜ್ಯ ಮಟ್ಟದ ಸಾಹಿತ್ಯಾತ್ಮಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ತನ್ನ ಸಂಸ್ಥೆಯ 32ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವ ಕವಿ ಕುವೆಂಪು ನೆನಪಿನ ರಾಜ್ಯ ಮಟ್ಟದ ಸಾಹಿತ್ಯೋತ್ಸವವನ್ನು ಮೇ 28 ರಂದು ಮೈಸೂರಿನಲ್ಲಿ ಆಯೋಜಿಸಿತ್ತು.
ಸಮಾರಂಭದಲ್ಲಿ ಮುಂಬಯಿಯ ಹಿರಿಯ ಸಾಹಿತಿ ಡಾ| ಜಿ. ಡಿ. ಜೋಷಿ ಅವರನ್ನು ವಿಶ್ವ ಕವಿ ಕುವೆಂಪು ಸಾಹಿತ್ಯ ಪ್ರಶಸ್ತಿ ಮತ್ತು ಹವ್ಯಾಸಿ ಬರಹಗಾರ ರಮಣ್ ಶೆಟ್ಟಿ ರೆಂಜಾಳ, ಕವಿ ಅನಿತಾ ಪೂಜಾರಿ ತಾಕೋಡೆ ಮೊದಲಾದವರನ್ನು ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಡಾ| ಜಿ. ಡಿ. ಜೋಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಡಾ| ಸಿಪಿಕೆ, ಡಾ| ಎಂ. ಆರ್. ರವಿ, ಬನ್ನೂರು ಕೆ. ರಾಜು, ಡಿ. ಎನ್. ಕೃಷ್ಣಮೂರ್ತಿ, ಡಾ| ಪುಷ್ಪಾ$ ಅಯ್ಯಂಗಾರ್, ಶ್ರೀಮತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮುಂತಾದ ಗಣ್ಯರ ಸಮ್ಮುಖದಲ್ಲಿ ಡಾ| ಲತಾ ರಾಜಶೇಖರ್ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಮಹಾಕವಿ ಕುವೆಂಪುರವರ ಸಾಧನೆ, ಸಾಹಿತ್ಯ , ಸಮಾಜ ಸೇವೆ ಇತ್ಯಾದಿ ಹಿರಿಮೆಗಳನ್ನು ಸ್ಮರಿಸಲಾಯಿತು. ಡಾ| ಜಿ. ಡಿ. ಜೋಷಿ ಅವರ ಕನ್ನಡದ ಕಣ್ಮಣಿಗಳು ಮತ್ತು ಕಲ್ಪನಾ ರಾಜ್ಯದಲ್ಲಿ ಕೃತಿಗಳೂ ಸೇರಿದಂತೆ ಒಟ್ಟು ಹತ್ತು ಕೃತಿಗಳು ಒಂದೇ ವೇದಿಕೆಯಲ್ಲಿ$ ಬಿಡುಗಡೆ ಕಂಡದ್ದು ಅಂದಿನ ವಿಶೇಷತೆಯಾಗಿತ್ತು.
ಡಾ| ಜಿ. ಡಿ. ಜೋಷಿಯವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇದ್ದುಕೊಂಡು ಸಾಹಿತ್ಯ ಸೇವೆ ಗೈದ ಇತರ ನಾಲ್ವರು ಸಾಹಿತಿಗಳಿಗೆ ವಿಶ್ವ ಕವಿ ಕುವೆಂಪು ಸಾಹಿತ್ಯ ಪ್ರಶಸ್ತಿಯನ್ನೂ, ಪುಣೆಯ ಕವಿ ಪೊಳಲಿ ಮಹೇಶ ಹೆಗಡೆಯವರನ್ನು ಒಳಗೊಂಡಂತೆ ರಾಷ್ಟ್ರದ ಒಟ್ಟು 24 ಗಣ್ಯರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಯನ್ನೂ, ಹೊರನಾಡ ಕನ್ನಡಿಗರಾದ ಅನಿತಾ ಪೂಜಾರಿ ತಾಕೋಡೆ, ರಮಣ್ ಶೆಟ್ಟಿ ರೆಂಜಾಳ ಮತ್ತು ರಾಜ್ಯದ ಒಳನಾಡು ಹಾಗೂ ಹೊರನಾಡಿನ ಒಟ್ಟು 20 ಕವಿಗಳಿಗೆ ವಿಶ್ವ ಕವಿ ಕುವೆಂಪು ಕಾವ್ಯಪ್ರಶಸ್ತಿಯನ್ನೂ ಪ್ರದಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಭೇರ್ಯ ರಾಮ್ ಕುಮಾರ್ ಅವರ ಮುಂದಾಳತ್ವದಲ್ಲಿ ಜರಗಿದ 225ನೇ ಸಾಹಿತ್ಯ ಕಾರ್ಯಕ್ರಮ ಇದಾಗಿದ್ದು, ವಿವಿಧ ಕವಿಗಳ ಕವನಗಳನ್ನೊಳಗೊಂಡ ಅವರದೇ ಸಂಪಾದಕತ್ವದ ವಿಶ್ವ ಕವಿ ಕುವೆಂಪು-113 ಸಂಕಲನವನ್ನೂ ಬಿಡುಗಡೆಮಾಡಲಾಯಿತು. ಜೊತೆಗೆ ಕವಿಗೋಷ್ಠಿಯನ್ನೂ ಕಾರ್ಯಕ್ರಮದ ಕೊನೆಯಲ್ಲಿ ಹಮ್ಮಿಕೊಳ್ಳಲಾಯಿತು.
ಇದೇ ಅವಕಾಶವನ್ನು ವಿದ್ಯಾದಾನ, ನೇತ್ರದಾನ ನೋಂದಣಿಯಂತಹ ಆದರ್ಶ ಕಾರ್ಯಗಳಿಗೂ ಬಳಸಿಕೊಂಡು ವಿದ್ಯೆಯಿಲ್ಲದವರಿಗೆ ವಿದ್ಯೆಗೆ ಸಹಕರಿಸುವ, ಕಣ್ಣಿಲ್ಲದವರಿಗೆ ಕಣ್ಣಾಗುವ ಸದವಕಾಶ ಕಾರ್ಯಕ್ರಮದಲ್ಲಿ ಒದಗಿಸಲಾಗಿತ್ತು.